ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರನ್ನೇ ತಲ್ಲಣಗೊಳಿಸುವ ಭೀಕರ ಘಟನೆಯೊಂದು ನಡೆದಿದೆ. ಪ್ರೇಮಿ ಜೊತೆ ಸೇರಿ ಯುವತಿಯೊಬ್ಬಳು ತನ್ನ ಹೆತ್ತ ತಂದೆ-ತಾಯಿ ಹಾಗೂ ಒಡಹುಟ್ಟಿದ ತಂಗಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಒಂದೇ ಕುಟುಂಬದ ಮೂವರು ಜೀವರಾಶಿಯೇ ಸರ್ವನಾಶವಾಗಿದೆ. ಈ ರಕ್ತಸಿಕ್ತ ಘಟನೆ ಕೆ.ಆರ್. ಪುರದ ಶೀಗೆಹಳ್ಳಿಯ ವಸತಿ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ ರಾತ್ರಿ ನಡೆದಿದೆ.
ಸೋಮಸುಂದರ್ (55), ಮುತ್ತುಲಕ್ಷ್ಮಿ (48) ಹಾಗೂ ಇವರ ಕಿರಿಯ ಮಗಳು ಸುಪ್ರಿಯಾ (20) ಕೊಲೆಯಾದ ದುರ್ದೈವಿಗಳಾಗಿದ್ದಾರೆ. ದಂಪತಿಯ ಮೊದಲ ಮಗಳು ಶ್ವೇತಾ ಹಾಗೂ ಆಕೆಯ ಲೀವ್-ಇನ್ ಪಾರ್ಟ್‌ನರ್ ಕೆನತ್ ಎಂಬಾತನೇ ಈ ಘೋರ ಕೃತ್ಯ ಎಸಗಿರುವ ಪ್ರಮುಖ ಆರೋಪಿಗಳಾಗಿದ್ದಾರೆ.
ಶ್ವೇತಾ ಹಾಗೂ ಕೆನತ್ ಇಬ್ಬರೂ ಲೀವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದು, ಇದಕ್ಕೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ನಿನ್ನೆ ರಾತ್ರಿ ಮನೆಯಲ್ಲಿ ಪೋಷಕರು ಹಾಗೂ ಆರೋಪಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದಾಗ, ಆರೋಪಿಗಳು ಚಾಕುವಿನಿಂದ ಇರಿದು ಮೂವರನ್ನೂ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಶೀಗೆಹಳ್ಳಿಯ ಢಾಮ್ನಿಕ್ ಲೇಔಟ್ ಅಪಾರ್ಟ್‌ಮೆಂಟ್‌ನಲ್ಲಿ ಈ ರಕ್ತಪಾತ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಕೆ.ಆರ್. ಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹಗಳನ್ನು ಅವಲಹಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ತಲೆಮರೆಸಿಕೊಂಡಿರುವ ಪಾಗಲ್ ಪ್ರೇಮಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

Leave a Reply