NEET ಪರೀಕ್ಷೆ ಅಕ್ರಮ ತಡೆಗೆ ಮಾಸ್ಟರ್ ಸ್ಟ್ರೋಕ್: Playstore ನಿಂದ ‘ಟೆಲಿಗ್ರಾಮ್’ ಆಪ್ ರಿಮೂವ್ ಮಾಡಿದ Google, ಆಪಲ್ ಸರದಿ!

ಹಂಚಿಕೊಳ್ಳಿ

 

ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಆದೇಶದ ಮೇರೆಗೆ ಗೂಗಲ್ ಸಂಸ್ಥೆಯು ಮಂಗಳವಾರ ತನ್ನ ಪ್ಲೇ ಸ್ಟೋರ್‌ನಿಂದ (Play Store) ಪ್ರಸಿದ್ಧ ಮೆಸೇಜಿಂಗ್ ಆಪ್ ಟೆಲಿಗ್ರಾಮ್ (Telegram) ಅನ್ನು ತೆಗೆದುಹಾಕಿದೆ. ಮೂಲಗಳ ಪ್ರಕಾರ, ಆಪಲ್ (Apple) ಕೂಡ ಇದೇ ಹಾದಿ ತುಳಿಯಲಿದ್ದು, ತನ್ನ ಆಪ್ ಸ್ಟೋರ್‌ನಿಂದ ಟೆಲಿಗ್ರಾಮ್ ಅನ್ನು ಡಿಲಿಸ್ಟ್ ಮಾಡುವ ಸಾಧ್ಯತೆಯಿದೆ.

ಜೂನ್ 21 ರಂದು ನಡೆಯಲಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG) ಮರುಪರೀಕ್ಷೆಯ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗುವುದನ್ನು ತಡೆಯಲು ಜೂನ್ 22 ರವರೆಗೆ ಟೆಲಿಗ್ರಾಮ್ ಆಪ್ ಅನ್ನು ನಿರ್ಬಂಧಿಸುವಂತೆ ಸರ್ಕಾರ ಎರಡೂ ಟೆಕ್ ದೈತ್ಯ ಕಂಪನಿಗಳಿಗೆ ಸೂಚನೆ ನೀಡಿತ್ತು.

​ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಈ ದೇಶವ್ಯಾಪಿ ಪರೀಕ್ಷೆಯನ್ನು ನಡೆಸುತ್ತದೆ. ಈ ಹಿಂದೆ ಮೇ 3 ರಂದು ನಡೆದಿದ್ದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಇದೀಗ ಮರುಪರೀಕ್ಷೆಯನ್ನು ಯಾವುದೇ ಅಕ್ರಮಗಳಿಲ್ಲದೆ ಪಾರದರ್ಶಕವಾಗಿ ನಡೆಸಲು ಸರ್ಕಾರ ಮುಂದಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್‌ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್, ಜೂನ್ 21ರ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಆಸ್ಪದ ನೀಡಬಾರದು ಎಂಬ ಉದ್ದೇಶದಿಂದ ಜೂನ್ 22 ರವರೆಗೆ ಟೆಲಿಗ್ರಾಮ್ ಮೇಲೆ ನಿರ್ಬಂಧ ಹೇರಲಾಗಿದೆ ಹಾಗೂ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಸಾಧ್ಯವಿರುವ ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

​ಸದ್ಯ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಟೆಲಿಗ್ರಾಮ್ ಆಪ್ ಡೌನ್‌ಲೋಡ್ ಮಾಡಲು ಪ್ರಯತ್ನಿಸಿದರೆ, “this app is not available” ಎಂಬ ಸಂದೇಶ ಕಾಣಿಸುತ್ತಿದೆ. ಈಗಾಗಲೇ ಆಪ್ ಡೌನ್‌ಲೋಡ್ ಮಾಡಿಕೊಂಡಿರುವ ಬಳಕೆದಾರರಿಗೂ ಆಪ್ ಬಳಸುವಾಗ ಕೆಲವೊಂದು ನಿರ್ಬಂಧಗಳು ಎದುರಾಗುವ ಸಾಧ್ಯತೆಯಿದೆ. ಟೆಲಿಗ್ರಾಮ್‌ನಲ್ಲಿರುವ ಮೆಸೇಜ್ ಎಡಿಟ್ ಮಾಡುವ ಫೀಚರ್ ಅನ್ನು ಜೂನ್ 30 ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆಯೂ ಸರ್ಕಾರ ಸೂಚಿಸಿದೆ. ಪರೀಕ್ಷೆ ಮುಗಿದ ನಂತರ ಹಳೆಯ ಮೆಸೇಜ್‌ಗಳನ್ನು ಎಡಿಟ್ ಮಾಡಿ, ಪರೀಕ್ಷೆಗೂ ಮುನ್ನವೇ ಪತ್ರಿಕೆ ಸೋರಿಕೆಯಾಗಿತ್ತು ಎಂದು ನಕಲಿ ಸಾಕ್ಷ್ಯಗಳನ್ನು ಸೃಷ್ಟಿಸುವ ಜಾಲಕ್ಕೆ ಬ್ರೇಕ್ ಹಾಕಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

​ಯಾವುದೇ ವ್ಯಕ್ತಿ ಟೆಲಿಗ್ರಾಮ್‌ನಲ್ಲಿ ಗ್ರೂಪ್‌ಗಳನ್ನು ಸರ್ಚ್ ಮಾಡಿ, ಅಡ್ಮಿನ್ ಅನುಮತಿಯಿಲ್ಲದೆ ಸುಲಭವಾಗಿ ಸೇರಿಕೊಳ್ಳಬಹುದಾದ ಅವಕಾಶವಿರುವುದರಿಂದ ಅಕ್ರಮ ಚಟುವಟಿಕೆಗಳಿಗೆ ಇದು ಸುಲಭ ವೇದಿಕೆಯಾಗಿದೆ. ಎನ್‌ಟಿಎ ಶಿಫಾರಸಿನ ಮೇರೆಗೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 69A ಅಡಿಯಲ್ಲಿ ಜೂನ್ 22, 2026 ರವರೆಗೆ ಟೆಲಿಗ್ರಾಮ್ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.

ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ಸೈಬರ್ ಕ್ರೈಮ್ ಸಮನ್ವಯ ಕೇಂದ್ರವು (I4C), ಬಿಹಾರ, ಗುಜರಾತ್ ಮತ್ತು ರಾಜಸ್ಥಾನದ ಪೊಲೀಸ್ ಪಡೆಗಳ ನೆರವಿನೊಂದಿಗೆ ಈಗಾಗಲೇ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಂಚನೆಯ ಕುರಿತು ಸುಳ್ಳು ಮಾಹಿತಿ ಹರಡುತ್ತಿದ್ದ ಹಲವಾರು ಟೆಲಿಗ್ರಾಮ್ ಚಾನೆಲ್‌ಗಳು ಮತ್ತು ಗ್ರೂಪ್‌ಗಳನ್ನು ಬ್ಲಾಕ್ ಮಾಡಿದೆ.

​ಸರ್ಕಾರದ ಈ ದಿಢೀರ್ ನಿರ್ಧಾರವನ್ನು ಡಿಜಿಟಲ್ ಹಕ್ಕುಗಳ ಪ್ರತಿಪಾದಕರು ಮತ್ತು ಸಾರ್ವಜನಿಕ ನೀತಿ ಸಂಸ್ಥೆಗಳು ತೀವ್ರವಾಗಿ ಟೀಕಿಸಿವೆ. ಸಾರ್ವಜನಿಕ ನೀತಿ ಸಂಸ್ಥೆ ಐಜಿಎಪಿ (IGAP) ಪಾಲುದಾರ ಧ್ರುವ್ ಗರ್ಗ್ ಪ್ರತಿಕ್ರಿಯಿಸಿ, ನೀಟ್ ನಂತಹ ಬೃಹತ್ ಪರೀಕ್ಷೆಯ ಪಾವಿತ್ರ್ಯತೆ ಕಾಪಾಡಲು ಸರ್ಕಾರ ಕ್ರಮ ಕೈಗೊಳ್ಳುವುದು ಸರಿಯಾದದ್ದೇ ಆದರೂ, ಕೇವಲ ಟೆಲಿಗ್ರಾಮ್ ಅನ್ನು ಮಾತ್ರ ನಿರ್ಬಂಧಿಸುವುದು ಎಷ್ಟು ಸರಿ? ಇದು ವಿದ್ಯಾರ್ಥಿಗಳು, ಶಿಕ್ಷಕರು, ಪತ್ರಕರ್ತರು ಸೇರಿದಂತೆ ಸಾಮಾನ್ಯ ಬಳಕೆದಾರರಿಗೂ ತೊಂದರೆಯುಂಟುಮಾಡುತ್ತದೆ, ವದಂತಿಗಳು ಕೇವಲ ಟೆಲಿಗ್ರಾಮ್ ಮೂಲಕ ಮಾತ್ರವಲ್ಲ, ಇತರ ಪ್ಲಾಟ್‌ಫಾರ್ಮ್‌ಗಳ ಮೂಲಕವೂ ಹರಡುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ ಡಿಜಿಟಲ್ ವಕಾಲತ್ತು ಗುಂಪಾದ ‘ಇಂಟರ್ನೆಟ್ ಫ್ರೀಡಂ ಫೌಂಡೇಶನ್’ (IFF) ಕೂಡ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಇಡೀ ಟೆಲಿಗ್ರಾಮ್ ಆಪ್ ಅನ್ನು ಬ್ಲಾಕ್ ಮಾಡುವುದು ಕೇವಲ ಬ್ಯಾಂಡ್-ಏಡ್ ಪರಿಹಾರವಷ್ಟೇ, ಇದು ಪರೀಕ್ಷಾ ವಂಚನೆಗೆ ಅತ್ಯಂತ ಅಸಮಾನವಾದ ಪ್ರತಿಕ್ರಿಯೆಯಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.

Leave a Reply

Your email address will not be published. Required fields are marked *

Advertisement


This will close in 3 seconds