ರಾಜ್ಯಸಭೆ ರೇಸ್‌ನಲ್ಲಿ ಸುಮಲತಾ ಅಂಬರೀಷ್ ಮುಂಚೂಣಿಗೆ: ಸದಾನಂದಗೌಡರ ಪಟ್ಟಿಗೆ ಕತ್ತರಿ ಹಾಕಿದ ಕಮಲ ವರಿಷ್ಠರು!

ಬೆಂಗಳೂರು: ರಾಜ್ಯಸಭಾ ಚುನಾವಣೆಯ ರಣಕಣ ರಂಗೇರುತ್ತಿದ್ದು, ಅಭ್ಯರ್ಥಿ ಯಾರು ಎಂಬ ಸಸ್ಪೆನ್ಸ್ ಬಿಜೆಪಿ ಪಾಳೆಯದಲ್ಲಿ ಜೋರಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ನಡೆದ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ (DV Sadananda Gowda)  ಹಾಗೂ ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ ಅವರ ಹೆಸರುಗಳನ್ನು ಅಂತಿಮಗೊಳಿಸಿ ದೆಹಲಿ ವರಿಷ್ಠರಿಗೆ ಕಳುಹಿಸಿಕೊಡಲಾಗಿತ್ತು. ಆದರೆ, ಈಗ ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ದಿಢೀರ್ ಬದಲಾವಣೆಗಳಿಂದಾಗಿ ಹಳೆಯ ಲಿಸ್ಟ್ ಬದಿಗೆ ಸರಿದಿದ್ದು, ಸುಮಲತಾ ಅಂಬರೀಷ್ (Sumalatha Ambareesh) ಅವರ ಹೆಸರು ಮುಂಚೂಣಿಗೆ ಬಂದಿದೆ.

ರಾಜ್ಯ ಆಡಳಿತಾರೂಢ ಕಾಂಗ್ರೆಸ್ ಪಾಳೆಯದಲ್ಲಿ ಮಹತ್ತರ ರಾಜಕೀಯ ಬದಲಾವಣೆಯಾಗುತ್ತಿದ್ದು, ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಗಾದಿ ಏರಲು ಸಜ್ಜಾಗುತ್ತಿದ್ದಾರೆ. ಈ ಬೆನ್ನಲ್ಲೇ ಒಕ್ಕಲಿಗ ಮತ್ತು ಸಕ್ಕರೆ ನಾಡು ಮಂಡ್ಯ ಭಾಗದಲ್ಲಿ ಕಾಂಗ್ರೆಸ್‌ಗೆ ಬ್ರೇಕ್ ಹಾಕಲು ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲಾನ್ ರೂಪಿಸಿದೆ. ಸುಮಲತಾ ಅಂಬರೀಷ್ ಅವರ ವರ್ಚಸ್ಸು ಮತ್ತು ರಾಜಕೀಯ ಶಕ್ತಿಯನ್ನು ಬಳಸಿಕೊಳ್ಳಲು ಖುದ್ದು ಬಿಜೆಪಿ ವರಿಷ್ಠರೇ ಈ ಬಾರಿ ಅವರ ಹೆಸರಿನ ಬಗ್ಗೆ ತೀವ್ರ ಆಸಕ್ತಿ ತೋರಿಸಿದ್ದಾರೆ ಎಂದು ತಿಳಿದುಬಂದಿದೆ.

ಬಿಜೆಪಿಗೆ ಸಿಗಲಿರುವ ಒಂದು ಸ್ಥಾನಕ್ಕೆ ಮಿತ್ರಪಕ್ಷ ಜೆಡಿಎಸ್‌ನ (JDS) ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು (HD Devegowda) ಪರಿಗಣಿಸುವ ಬಗ್ಗೆಯೂ ವರಿಷ್ಠರ ಮಟ್ಟದಲ್ಲಿ ಸುದೀರ್ಘ ಚರ್ಚೆಗಳು ನಡೆಯುತ್ತಿವೆ. ಆದರೆ ಈ ಬಗ್ಗೆ ಇದುವರೆಗೆ ಯಾವುದೇ ಅಂತಿಮ ತೀರ್ಮಾನ ಹೊರಬಿದ್ದಿಲ್ಲ. ಒಂದು ವೇಳೆ ಕೊನೆ ಕ್ಷಣದಲ್ಲಿ ದೇವೇಗೌಡರಿಗೆ ಬೆಂಬಲ ನೀಡುವುದು ಬೇಡ ಎಂಬ ನಿರ್ಧಾರಕ್ಕೆ ಎನ್‌ಡಿಎ ಮೈತ್ರಿಕೂಟ ಬಂದರೆ, ಬಿಜೆಪಿಯಿಂದ ಸುಮಲತಾ ಅಂಬರೀಷ್ ಅವರ ಹೆಸರು ಅಂತಿಮಗೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಮಂಡ್ಯದ ಪಕ್ಷೇತರ ಸಂಸದೆಯಾಗಿದ್ದ ಸುಮಲತಾ ಅವರು ಬಿಜೆಪಿಗೆ ಬೇಷರತ್ ಬೆಂಬಲ ಘೋಷಿಸಿದ್ದರು. ಆದರೆ, ಜೆಡಿಎಸ್ ಪಕ್ಷವು ಎನ್‌ಡಿಎ ಮೈತ್ರಿಕೂಟದ ಭಾಗವಾದ ಬಳಿಕ ಮೈತ್ರಿ ಧರ್ಮದ ಹಿನ್ನೆಲೆಯಲ್ಲಿ ಅವರು ತಮ್ಮ ಮಂಡ್ಯ ಕ್ಷೇತ್ರವನ್ನು ಎಚ್.ಡಿ. ಕುಮಾರಸ್ವಾಮಿ ಅವರಿಗಾಗಿ ಬಿಟ್ಟುಕೊಟ್ಟಿದ್ದರು. ಆ ಬಳಿಕ ಸುಮಲತಾ ಅವರಿಗೆ ಪಕ್ಷದಲ್ಲಿ ಯಾವುದೇ ಸೂಕ್ತ ಸ್ಥಾನಮಾನ ಸಿಕ್ಕಿರಲಿಲ್ಲ. ಇದೀಗ ಎರಡು ವರ್ಷಗಳ ನಂತರ ಅವರ ರಾಜಕೀಯ ಶಕ್ತಿಯನ್ನು ಗುರುತಿಸಿ ಮೇಲ್ಮನೆಗೆ ಕಳುಹಿಸುವ ಲೆಕ್ಕಾಚಾರ ನಡೆದಿದೆ. ಅಂತಿಮವಾಗಿ ಹೈಕಮಾಂಡ್ ಅಧಿಕೃತವಾಗಿ ಟಿಕೆಟ್ ಘೋಷಿಸುವವರೆಗೂ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *