
ಯಲ್ಲಾಪುರ: ತಾಲೂಕಿನ ಆರ್ಥಿಕತೆಯ ಬೆನ್ನೆಲುಬಾಗಿರುವ ಎಲ್ಲಾ ಪ್ರವಾಸಿ ತಾಣಗಳನ್ನು ಸಾರ್ವಜನಿಕರ ವೀಕ್ಷಣೆಗೆ ತಕ್ಷಣವೇ ಮುಕ್ತಗೊಳಿಸಬೇಕು. ಒಂದು ವಾರದ ಅವಧಿಯಲ್ಲಿ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಮಂಡಲ ಉಪಾಧ್ಯಕ್ಷ ಗಣೇಶ ಹೆಗಡೆ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮ್ಮ ತಾಲೂಕಿನಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಅಪಾರವಾದ ಅವಕಾಶಗಳಿವೆ. ಹೀಗಿದ್ದೂ ಪ್ರಮುಖ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿರುವುದು ಖಂಡನೀಯ. ಈ ಅವೈಜ್ಞಾನಿಕ ನಿರ್ಧಾರದಿಂದಾಗಿ ತಾಲೂಕಿನ ಒಟ್ಟಾರೆ ಪ್ರವಾಸೋದ್ಯಮ ವ್ಯವಸ್ಥೆಯೇ ತೀವ್ರ ಸಂಕಷ್ಟಕ್ಕೆ ಸಿಲುಕಿದೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

“ತಾಲೂಕಿನ ಸುಂದರ ಜಲಪಾತಗಳು ಮತ್ತು ಐತಿಹಾಸಿಕ ದೇವಸ್ಥಾನಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಮಳೆಗಾಲದ ಸಮಯವೇ ಈ ತಾಣಗಳ ಸೌಂದರ್ಯವನ್ನು ಆಸ್ವಾದಿಸಲು ಪ್ರಶಸ್ತವಾದ ಕಾಲವಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಅಪಾಯದ ನೆಪವೊಡ್ಡಿ ಸತತ ೩-೪ ತಿಂಗಳುಗಳ ಕಾಲ ಪ್ರವಾಸಿಗರಿಗೆ ನಿರ್ಬಂಧ ಹೇರುತ್ತಿರುವುದು ದುರಂತ. ಕೃಷಿಯ ನಂತರ ತಾಲೂಕಿಗೆ ಪ್ರವಾಸೋದ್ಯಮವೇ ಪ್ರಮುಖ ಆದಾಯದ ಮೂಲವಾಗಿದೆ. ಪ್ರವಾಸಿ ತಾಣಗಳ ಮುಚ್ಚುಗಡೆಯಿಂದಾಗಿ ತಾಲೂಕಿನ ಆರ್ಥಿಕ ವಹಿವಾಟಿನಲ್ಲಿ ಶೇ. ೪೦ ರಷ್ಟು ನಷ್ಟ ಉಂಟಾಗಿದೆ” ಎಂದು ಅವರು ಆರ್ಥಿಕ ಪರಿಸ್ಥಿತಿಯನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಬಾಲಕೃಷ್ಣ ನಾಯಕ ಅವರು, “ತಾಲೂಕಿನ ಹೋಟೆಲ್, ಲಾಡ್ಜ್ ಉದ್ಯಮ ಹಾಗೂ ಗ್ರಾಮೀಣ ಭಾಗದ ಸಣ್ಣಪುಟ್ಟ ವ್ಯಾಪಾರಿಗಳು ಪ್ರವಾಸೋದ್ಯಮವನ್ನೇ ನೆಚ್ಚಿ ಜೀವನ ನಡೆಸುತ್ತಿದ್ದಾರೆ. ಮಳೆಯಿಂದ ಉಂಟಾಗಬಹುದಾದ ಅಪಾಯಗಳನ್ನು ತಡೆಯಲು ಅಧಿಕಾರಿಗಳು ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು, ಪ್ರವಾಸಿಗರ ಪ್ರವೇಶವನ್ನೇ ಸಂಪೂರ್ಣವಾಗಿ ನಿಷೇಧಿಸುವುದು ಸರಿಯಾದ ಕ್ರಮವಲ್ಲ. ಜವಾಬ್ದಾರಿಯುತ ಅಧಿಕಾರಿಗಳ ಈ ನಿರ್ಧಾರದಿಂದಾಗಿ ಸ್ಥಳೀಯ ಉದ್ಯಮಿಗಳು ಮತ್ತು ಸಾರ್ವಜನಿಕರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ” ಎಂದು ಆಕ್ರೋಶ ಹೊರಹಾಕಿದರು.
ಬಳಿಕ ಮಾತನಾಡಿದ ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ, “ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಸಾರ್ವಜನಿಕರ ಸಹನೆಯನ್ನು ದೌರ್ಬಲ್ಯವೆಂದು ಭಾವಿಸಿದೆ. ಸರ್ಕಾರದ ಇತ್ತೀಚಿನ ಜನವಿರೋಧಿ ಆದೇಶಗಳು ಸಾಮಾನ್ಯ ಜನರ ಬದುಕನ್ನು ದುಸ್ತರಗೊಳಿಸಿವೆ. ಈ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ‘ನಮ್ಮ ಮನೆ ನಮ್ಮ ಹಕ್ಕು’ ಜನಾಗ್ರಹ ಆಂದೋಲನವನ್ನು ಎಲ್ಲರೂ ಒಗ್ಗೂಡಿ ಯಶಸ್ವಿಗೊಳಿಸಬೇಕು” ಎಂದು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ, ಪ್ರಮುಖರಾದ ಶ್ರೀನಿವಾಸ ಗಾಂವ್ಕರ ಹಾಗೂ ಮಾಲತೇಶ ಜಲಧಿ ಸೇರಿದಂತೆ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.















Leave a Reply