ಹಿನ್ನೂರು ದೇವಸ್ಥಾನದಲ್ಲಿ ರಸಮಂಜರಿ ಸಂಭ್ರಮ: 26 ವರ್ಷಗಳಿಂದ ಅನ್ನಸಂತರ್ಪಣೆಗೆ ಅಡುಗೆ ಸೇವೆ ಸುಬ್ಬಣ್ಣ ಭಟ್‌ ಹಿಂಡಲಮನೆ ಅವರಿಗೆ ಸನ್ಮಾನ!

ಹಂಚಿಕೊಳ್ಳಿ

ಹೊನ್ನಾವರ: ತಾಲೂಕಿನ ಹಿನ್ನೂರಿನ ಪ್ರಸಿದ್ಧ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಶಂಭುಲಿಂಗೇಶ್ವರ ಹಾಗೂ ಶ್ರೀ ದುರ್ಗಾಂಬಿಕಾ ಭಜನಾ ಸಮಿತಿಯ ಆಶ್ರಯದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಭಾನುವಾರ ಸಂಜೆ ಆಯೋಜಿಸಲಾಗಿದ್ದ ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕಲಾಭಿಮಾನಿ ಫ್ರೆಂಡ್ಸ್ ಗೆಳೆಯರ ಬಳಗ ಪ್ರಾಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವು ಭಜನಾ ಕುಣಿತ, ನೃತ್ಯ, ಹಾಸ್ಯ ಹಾಗೂ ಮಿಮಿಕ್ರಿ ಪ್ರದರ್ಶನಗಳ ಮೂಲಕ ನೆರೆದಿದ್ದ ನೂರಾರು ಕಲಾರಸಿಕರನ್ನು ರಂಜಿಸಿತು. ಸಂಜೆ 7.30ಕ್ಕೆ ಹಿನ್ನೂರು ದೇವಸ್ಥಾನದ ಆವರಣದಲ್ಲಿ ಆರಂಭವಾದ ಕಾರ್ಯಕ್ರಮ ತಡರಾತ್ರಿಯವರೆಗೂ ಮುಂದುವರಿಯಿತು.

ವೇದಿಕೆಯಲ್ಲಿ ಖ್ಯಾತ ಕಲಾ ಪ್ರತಿಭೆಗಳಾದ ಚೇತನಾ ಗುಣವಂತೆ, ನಿಲೇಶ್ ಹಾಗೂ ಹನುಮಂತ ಜಿ. ತಮ್ಮ ಗಾಯನ ಮತ್ತು ನಟನೆಯ ಮೂಲಕ ಪ್ರೇಕ್ಷಕರ ಮನಗೆದ್ದರು. ಶ್ರೀಕಾಂತ್ ಅವರ ಚಾತುರ್ಯಪೂರ್ಣ ನಿರೂಪಣೆ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಜನರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

26 ವರ್ಷಗಳ ಅಡುಗೆ ಸೇವೆಗೆ ಸುಬ್ಬಣ್ಣ ಭಟ್‌ ಹಿಂಡಲಮನೆಗೆ ಗೌರವ

ನವರಾತ್ರಿ ಉತ್ಸವದ ಸಂಭ್ರಮದ ನಡುವೆ, ದೇವಸ್ಥಾನದ ಅನ್ನಸಂತರ್ಪಣೆಗೆ ಸುಮಾರು 26 ವರ್ಷಗಳಿಂದ ಅಡುಗೆ ತಯಾರಿಸುವ ಮೂಲಕ ನಿರಂತರ ಸೇವೆ ಸಲ್ಲಿಸುತ್ತಿರುವ ಖರ್ವಾ ಹಿಂಡಲಮನೆಯ ಸುಬ್ಬಣ್ಣ ಭಟ್ ಅವರನ್ನು ದೇವಸ್ಥಾನದ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ದೇವಸ್ಥಾನದಲ್ಲಿ ನಡೆಯುವ ಅನ್ನಸಂತರ್ಪಣೆಯ ಸೇವೆಯಲ್ಲಿ ದೀರ್ಘಕಾಲ ತೊಡಗಿಸಿಕೊಂಡಿರುವ ಅವರ ಕೊಡುಗೆಯನ್ನು ಗುರುತಿಸಿ ಗೌರವ ಸಮರ್ಪಿಸಲಾಯಿತು.

ಅಕ್ಟೋಬರ್ 11ರಿಂದ ಆರಂಭಗೊಂಡಿರುವ ನವರಾತ್ರಿ ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಪ್ರತಿದಿನ ಅನ್ನಸಂತರ್ಪಣೆ ನಡೆಯುತ್ತಿದ್ದು, ಭಾನುವಾರದ ರಸಮಂಜರಿ ಕಾರ್ಯಕ್ರಮ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂತು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಶೇಖರ ನಾಯ್ಕ, ಕಾರ್ಯದರ್ಶಿ ತಿಮ್ಮಪ್ಪ ನಾಯ್ಕ, ಪ್ರಧಾನ ಅರ್ಚಕ ಸುದರ್ಶನ ಭಟ್, ಮಹಾಬಲೇಶ್ವರ ಹೆಗಡೆ, ದೇವಸ್ಥಾನ ಸಮಿತಿಯ ಉಮೇಶ ನಾಯ್ಕ, ಶ್ರೀಧರ ನಾಯ್ಕ, ಬಾಲು ನಾಯ್ಕ, ಗಣೇಶ ನಾಯ್ಕ, ಗಜಾನನ ನಾಯ್ಕ, ವಿಠೋಬ ನಾಯ್ಕ, ನಾರಾಯಣ ನಾಯ್ಕ ಹಾಗೂ ಗೋಪಾಲ ಆಚಾರಿ ಸೇರಿದಂತೆ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *