ಹಿನ್ನೂರು ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ರಸಮಂಜರಿ ಸಂಭ್ರಮ

ಹಂಚಿಕೊಳ್ಳಿ

ಹೊನ್ನಾವರ: ತಾಲೂಕಿನ ಹಿನ್ನೂರಿನ ಪ್ರಸಿದ್ಧ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಶಂಭುಲಿಂಗೇಶ್ವರ ಹಾಗೂ ಶ್ರೀ ದುರ್ಗಾಂಬಿಕಾ ಭಜನಾ ಸಮಿತಿಯ ಆಶ್ರಯದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮ ನೂರಾರು ಕಲಾಭಿಮಾನಿಗಳ ಮನಸೂರೆಗೊಂಡಿತು.

ಕಲಾಭಿಮಾನಿ ಫ್ರೆಂಡ್ಸ್ ಗೆಳೆಯರ ಬಳಗದ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಜನಾ ಕುಣಿತ, ನೃತ್ಯ, ಹಾಸ್ಯ ಹಾಗೂ ಮಿಮಿಕ್ರಿ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಿದವು. ಸಂಜೆ 7.30ಕ್ಕೆ ದೇವಸ್ಥಾನದ ಆವರಣದಲ್ಲಿ ಆರಂಭಗೊಂಡ ಕಾರ್ಯಕ್ರಮ ತಡರಾತ್ರಿಯವರೆಗೂ ನಡೆಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಜನರು ಕಲಾವಿದರ ಪ್ರತಿಭೆಯನ್ನು ಕಣ್ತುಂಬಿಕೊಂಡರು.

ವೇದಿಕೆಯಲ್ಲಿ ಖ್ಯಾತ ಕಲಾ ಪ್ರತಿಭೆಗಳಾದ ಚೇತನಾ ಗುಣವಂತೆ, ನಿಲೇಶ್ ಹಾಗೂ ಹನುಮಂತ ಜಿ. ತಮ್ಮ ಗಾಯನ ಮತ್ತು ನಟನೆಯ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಶ್ರೀಕಾಂತ್ ಅವರ ಚಾತುರ್ಯಪೂರ್ಣ ನಿರೂಪಣೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ವಿವಿಧ ಸಾಂಸ್ಕೃತಿಕ ಪ್ರಸ್ತುತಿಗಳೊಂದಿಗೆ ನವರಾತ್ರಿ ಸಂಭ್ರಮಕ್ಕೆ ಕಲೆಯ ಸೊಬಗು ಸೇರಿತು.

26 ವರ್ಷಗಳ ಸೇವೆಗೆ ಗೌರವ

ನವರಾತ್ರಿ ಉತ್ಸವದ ಧಾರ್ಮಿಕ ಸಂಭ್ರಮದ ನಡುವೆಯೇ ದೇವಸ್ಥಾನದ ಅನ್ನಸಂತರ್ಪಣೆಗೆ ಸುಮಾರು 26 ವರ್ಷಗಳಿಂದ ನಿರಂತರವಾಗಿ ಅಡುಗೆ ತಯಾರಿಸುವ ಮೂಲಕ ಸೇವೆ ಸಲ್ಲಿಸುತ್ತಿರುವ ಖರ್ವಾ ಹಿಂಡಲಮನೆಯ ಸುಬ್ಬಣ್ಣ ಭಟ್ ಅವರನ್ನು ದೇವಸ್ಥಾನದ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ದೇವಸ್ಥಾನದಲ್ಲಿ ನಡೆಯುವ ಅನ್ನಸಂತರ್ಪಣೆಯ ಅಡುಗೆ ಸೇವೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡು, ಭಕ್ತರಿಗೆ ಅನ್ನಪ್ರಸಾದ ಸಿದ್ಧಪಡಿಸುವ ಮಹತ್ವದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಿರುವ ಅವರ ಸೇವೆಯನ್ನು ಗುರುತಿಸಿ ಗೌರವ ಸಮರ್ಪಿಸಲಾಯಿತು. ನವರಾತ್ರಿ ಉತ್ಸವದ ಸಂದರ್ಭದಲ್ಲಿ ನಡೆದ ಈ ಸನ್ಮಾನವು ದೀರ್ಘಕಾಲದ ಸೇವಾ ಮನೋಭಾವಕ್ಕೆ ಸಂದ ಗೌರವವಾಗಿ ಗಮನ ಸೆಳೆಯಿತು.

ಅಕ್ಟೋಬರ್ 11ರಿಂದ ಆರಂಭಗೊಂಡಿರುವ ನವರಾತ್ರಿ ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಪ್ರತಿದಿನ ಅನ್ನಸಂತರ್ಪಣೆ ನಡೆಯುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನೂ ಆಯೋಜಿಸಲಾಗುತ್ತಿದ್ದು, ಭಾನುವಾರದ ರಸಮಂಜರಿ ಕಾರ್ಯಕ್ರಮ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ ಮೂಡಿಬಂತು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಶೇಖರ ನಾಯ್ಕ, ಕಾರ್ಯದರ್ಶಿ ತಿಮ್ಮಪ್ಪ ನಾಯ್ಕ, ಪ್ರಧಾನ ಅರ್ಚಕ ಸುದರ್ಶನ ಭಟ್, ಮಹಾಬಲೇಶ್ವರ ಹೆಗಡೆ, ದೇವಸ್ಥಾನ ಸಮಿತಿಯ ಉಮೇಶ ನಾಯ್ಕ, ಶ್ರೀಧರ ನಾಯ್ಕ, ಬಾಲು ನಾಯ್ಕ, ಗಣೇಶ ನಾಯ್ಕ, ಗಜಾನನ ನಾಯ್ಕ, ವಿಠೋಬ ನಾಯ್ಕ, ನಾರಾಯಣ ನಾಯ್ಕ ಹಾಗೂ ಗೋಪಾಲ ಆಚಾರಿ ಸೇರಿದಂತೆ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *