
ಯಲ್ಲಾಪುರ: ಅಡಿಕೆ ಮರಗಳನ್ನು ಕಡಿಯುವ ಹಕ್ಕನ್ನು ಅರಣ್ಯ ಇಲಾಖೆಗೆ ಯಾರೂ ಕೊಟ್ಟಿಲ್ಲ. ಮರಗಳನ್ನು ಉಳಿಸಿ ಬೆಳೆಸುವುದು ಇಲಾಖೆಯ ಕರ್ತವ್ಯವೇ ಹೊರತು, ರೈತರು ಕಷ್ಟಪಟ್ಟು ಬೆಳೆಸಿದ ಮರಗಳನ್ನು ಕಡಿಯುವುದಲ್ಲ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಕುಂದರಗಿ ಪಂಚಾಯತ್ ವ್ಯಾಪ್ತಿಯ ನಿವಾಸಿ ಸದಾಶಿವ ನಾಯ್ಕ ಎಂಬುವರ ತೋಟಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಭೇಟಿ ನೀಡಿ ಮರಗಳನ್ನು ಕಡಿದಿದ್ದರು. ಈ ಜಾಗಕ್ಕೆ ಪ್ರಮುಖರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಅನಂತಮೂರ್ತಿ ಹೆಗಡೆ ಅವರು ನೊಂದ ರೈತನಿಗೆ ಧೈರ್ಯ ತುಂಬಿದರು.

ಬಳಿಕ ಮಾತನಾಡಿದ ಅವರು, “ಸದಾಶಿವ ನಾಯ್ಕ ಅವರು ಕಳೆದ ಹಲವು ವರ್ಷಗಳಿಂದ ಇದೇ ಜಾಗದಲ್ಲಿ ವಾಸವಿದ್ದಾರೆ. ದೀರ್ಘಕಾಲದಿಂದ ಕೃಷಿ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಸುಮಾರು 6 ರಿಂದ 7 ವರ್ಷ ಪ್ರಾಯದ 40 ಅಡಿಕೆ ಗಿಡಗಳನ್ನು ಅಮಾನುಷವಾಗಿ ಕಡಿದು ಹಾಕಿದ್ದಾರೆ. ಇದು ರೈತನ ಕಣ್ಣೀರಿಗೆ ಕಾರಣವಾಗಿದೆ. ಅಧಿಕಾರಿಗಳಿಗೆ ರೈತರ ಬಗ್ಗೆ ಕನಿಕರ ಇರಬೇಕು. ಅರಣ್ಯ ಇಲಾಖೆಯ ಈ ಕ್ರಮವನ್ನು ನಾವು ಕಡಾಖಂಡಿತವಾಗಿ ಖಂಡಿಸುತ್ತೇವೆ. ನಾವು ಸದಾ ರೈತರ ಪರವಾಗಿ ನಿಲ್ಲಲಿದ್ದೇವೆ,” ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಯಲ್ಲಾಪುರ ಉಪಾಧ್ಯಕ್ಷ ಗಣೇಶ ಹೆಗಡೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ದೀಪಾ ರಾಘವೇಂದ್ರ ಸಿದ್ದಿ, ಮಾಳಕೊಪ್ಪ ಮಂಚಿಕೇರಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ವಿನೇಶ್ ಭಟ್, ಕಾರ್ಯದರ್ಶಿ ಬಾಬಣ್ಣ ಪತ್ರೆಕರ್, ಪ್ರಮುಖರಾದ ರಾಮಕೃಷ್ಣ ಹೆಗಡೆ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸೀತಾರಾಮ್ ಗೌಡ, ಭರಣಿ ಬೂತ್ ಅಧ್ಯಕ್ಷ ಗಂಗಾಧರ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.














Leave a Reply