ಓಡಿದರೆ ಬಿಟ್ಟಾರೇ ಯಲ್ಲಾಪುರ ಪೊಲೀಸರು?: 25 ವರ್ಷಗಳ ಹಿಂದೆ ಬಸ್ ಡ್ರೈವರ್ ಜೊತೆ ಜಗಳವಾಡಿ ಪರಾರಿಯಾಗಿದ್ದ ಅಸಾಮಿ ಗುಜರಾತ್‌ನಲ್ಲಿ ಅರೆಸ್ಟ್!”

ಹಂಚಿಕೊಳ್ಳಿ

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಬಸ್ ಚಾಲಕನೊಂದಿಗೆ ಗಲಾಟೆ ನಡೆಸಿ, ಕಳೆದ 25 ವರ್ಷಗಳಿಂದ ಕಾನೂನಿನ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಗುಜರಾತ್ ಮೂಲದ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಗುಜರಾತ್ ರಾಜ್ಯದ ಪೋರಬಂದರ ಜಿಲ್ಲೆಯ ಸಾಮಿರಾಡೀ ಗ್ರಾಮದ ನಿವಾಸಿಯಾದ ಕೆಸುಬಾಯಿ ಸಿಸೋಡಿಯಾ (52) ಬಂಧಿತ ಲಾರಿ ಚಾಲಕ. ಈತ 2001 ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದನು.


2001ರಲ್ಲಿ ಯಲ್ಲಾಪುರ-ಕಾರವಾರ ರಾಷ್ಟ್ರೀಯ ಹೆದ್ದಾರಿ 63ರ ರಸ್ತೆ ತಿರುವಿನ ಬಳಿ ಆರೋಪಿ ಕೆಸುಬಾಯಿ ತನ್ನ ಲಾರಿಯನ್ನು ಬೇಜವಾಬ್ದಾರಿಯಿಂದ ಚಲಾಯಿಸಿ ಈ ವೇಳೆ ಕೆಎಸ್‌ಆರ್‌ಟಿಸಿ ಬಸ್‌ ಒಂದನ್ನು ಹಿಂದಿಕ್ಕುವ ಭರದಲ್ಲಿ ಬಸ್ ಚಾಲಕನೊಂದಿಗೆ ತೀವ್ರ ಜಗಳ ತೆಗೆದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪವಿತ್ತು. ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ 2001 ರಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದ ಆರೋಪಿ, ನಂತರ ಕೋರ್ಟ್ ಹಾಜರಾಗದೆ ಕಾನೂನು ಉಲ್ಲಂಘಿಸಿದ್ದನು. ಪೊಲೀಸರು ಹಲವು ಬಾರಿ ವಾರೆಂಟ್ ಹಿಡಿದು ಹುಡುಕಿದರೂ ಆತನ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ನ್ಯಾಯಾಲಯವು ಈತನನ್ನು ದೀರ್ಘಕಾಲಿಕ ತಲೆಮರೆಸಿಕೊಂಡ ಆರೋಪಿ (LPC) ಎಂದು ಘೋಷಿಸಿತ್ತು.

ಪೊಲೀಸ್ ಅಧಿಕಾರಿಗಳ ಯಶಸ್ವಿ ಕಾರ್ಯಾಚರಣೆ:
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ (ಐ.ಪಿ.ಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ.ಕೃಷ್ಣಮೂರ್ತಿ ಹಾಗೂ ಶಿರಸಿ ಉಪಾಧೀಕ್ಷಕರಾದ ಗೀತಾ ಪಾಟೀಲ ಅವರ ಮಾರ್ಗದರ್ಶನದಲ್ಲಿ ಯಲ್ಲಾಪುರ ಪೊಲೀಸ್ ನಿರೀಕ್ಷಕರಾದ (PI) ಶ್ರೀ ರಮೇಶ ಹನಾಪುರ ಅವರ ನೇತೃತ್ವದಲ್ಲಿ ಉಪನಿರೀಕ್ಷಕರಾದ ರಾಜಶೇಖರ ವಂದಲಿ, ಸಿದ್ಧಪ್ಪ ಗುಡಿ ಹಾಗೂ ಮಹಾವೀರ ಕಾಂಬಳೆ ಅವರ ತಂಡವು ಆರೋಪಿಯ ಪತ್ತೆಗೆ ಜಾಲ ಬೀಸಿತ್ತು. ಆರೋಪಿಯು ಗುಜರಾತ್‌ನ ರಣಬಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡಗಿರುವ ಖಚಿತ ಮಾಹಿತಿ ಪಡೆದ ಪೊಲೀಸ್ ಸಿಬ್ಬಂದಿಗಳಾದ ರಾಘವೇಂದ್ರ ಮೂಳೆ ಹಾಗೂ ಮಾರುತಿ  ಆರೋಪಿಯನ್ನು ಹುಡುಕಿ ವಶಕ್ಕೆ ಪಡೆದರು. ಈ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸಂತೋಷ ಬಾಳೇರ, ಬಸವರಾಜ ಡಿ.ಕೆ, ಪರಮೇಶ್ವರ ಎಸ್.ಕೆ, ರೇಖಾ ಎಮ್ ಎಲ್ ಹಾಗೂ ಅಂಕೋಲಾ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಮಹಮದ್ ಶಫಿ ಶೇಖ್ ಸಹಕರಿಸಿದ್ದಾರೆ. ಜೊತೆಗೆ ಕಾರವಾರದ ಟೆಕ್ನಿಕಲ್ ಸೆಲ್ ವಿಭಾಗದ ಉದಯ ಗುನಗಾ, ಬಬನ್ ಡಿ ಮತ್ತು ಮಹಾಲಿಂಗ ಸಾವಳಗಿ ಅವರು ತಾಂತ್ರಿಕ ನೆರವು ನೀಡಿದ್ದಾರೆ. ಬಂಧಿತನನ್ನು  ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ವರ್ಷಗಳ ಕಾಲ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಹಳೇ ಅಪರಾಧಿಯನ್ನು ಹೆಡೆಮುರಿ ಕಟ್ಟಿದ ಇಡೀ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ತಂಡದ ದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *