ಇರಾಪುರಕ್ಕೆ ಸೂರ್ಯನೇ ಬಿಎಸ್ಎನ್‌ಎಲ್ ಮ್ಯಾನೇಜರ್; ಅವ್ನು ರಜೆ ಹಾಕಿದ್ರೆ ನೆಟ್‌ವರ್ಕ್‌ಗೂ ರಜೆ! ನೋಡಿ ಈ ವಿಶೇಷ ವರದಿ

ಹಂಚಿಕೊಳ್ಳಿ

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಪಂಚಾಯತ್ ವ್ಯಾಪ್ತಿಯ ಇರಾಪುರ ಗ್ರಾಮದಲ್ಲಿ ಸಾರ್ವಜನಿಕರ ಸಂಪರ್ಕ ಕ್ರಾಂತಿಗಾಗಿ ಸ್ಥಾಪಿಸಲಾದ ಬಿಎಸ್ಎನ್‌ಎಲ್ (BSNL) ಮೊಬೈಲ್ ಟವರ್ ಕೇವಲ ಪ್ರದರ್ಶನದ ವಸ್ತುವಾಗಿ ಪರಿಣಮಿಸಿದೆ. ಟವರ್ ನಿರ್ಮಾಣಗೊಂಡು ವರ್ಷ ಕಳೆದರೂ ಸಮರ್ಪಕವಾಗಿ ಸಿಗ್ನಲ್ ಸಿಗದೆ ಇರಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಬಿಸಿಲಿದ್ದರೆ ಮಾತ್ರ ನೆಟ್‌ವರ್ಕ್; ಮಳೆ-ಮೋಡ ಬಂದರೆ ಸಂಪರ್ಕ ಕಡಿತ!

ಈ ಭಾಗದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬಿಎಸ್ಎನ್‌ಎಲ್ ಟವರ್ ನಿರ್ಮಿಸಲಾಗಿದೆ. ಆದರೆ, ಇದುವರೆಗೆ ಇದಕ್ಕೆ ಅಗತ್ಯವಿರುವ ವಿದ್ಯುತ್ ಟಿಸಿ (Transformer) ಅಳವಡಿಸದಿರುವುದು ಇಲಾಖೆಯ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಪ್ರಸ್ತುತ ಈ ಟವರ್‌ಗೆ ಸೌರಶಕ್ತಿ (Solar Panel) ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಪರಿಣಾಮವಾಗಿ, ತೀವ್ರ ಬಿಸಿಲಿದ್ದಾಗ ಮಾತ್ರ ಟವರ್ ಚಾಲ್ತಿಯಲ್ಲಿರುತ್ತದೆ. ಮಳೆ ಬಂದಾಗ ಅಥವಾ ಮೋಡ ಕವಿದ ವಾತಾವರಣವಿದ್ದರೆ ನೆಟ್‌ವರ್ಕ್ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಮಲೆನಾಡಿನ ಈ ಭಾಗದಲ್ಲಿ ಹವಾಮಾನದ ಏರುಪೇರಿನಿಂದಾಗಿ ಸಾರ್ವಜನಿಕರು ವರ್ಷವಿಡೀ ಕತ್ತಲಲ್ಲಿ ಕಳೆಯುವಂತಾಗಿದೆ.

ತಾಂತ್ರಿಕ ಲೋಪಗಳ ಸರಮಾಲೆ: ಒಎಫ್‌ಸಿ ಬದಲು ಎಫ್‌ಟಿಟಿಎಚ್ ಕನೆಕ್ಷನ?

ಟವರ್‌ಗೆ ಶಾಶ್ವತ ಹಾಗೂ ವೇಗದ ಇಂಟರ್ನೆಟ್ ಸಂಪರ್ಕ ನೀಡಲು ಆಪ್ಟಿಕಲ್ ಫೈಬರ್ ಕೇಬಲ್ (OFC) ಅಳವಡಿಸಬೇಕಿತ್ತು. ಆದರೆ, ಬಿಎಸ್ಎನ್‌ಎಲ್ ಅಧಿಕಾರಿಗಳು ನಿಯಮ ಗಾಳಿಗೆ ತೂರಿ, ಎಫ್‌ಟಿಟಿಎಚ್ (FTTH) ಕೇಬಲ್‌ನಿಂದ ಜಾಯಿಂಟ್ ಮಾಡಿಕೊಂಡು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ಸಿಗ್ನಲ್ ಗುಣಮಟ್ಟ ಅತ್ಯಂತ ಕಳಪೆಯಾಗಿದ್ದು, ಗ್ರಾಹಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ.

ರೇಷನ್ ಸಿಗದೆ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರು

ಇರಾಪುರ ಗ್ರಾಮಸ್ಥರು ನ್ಯಾಯಬೆಲೆ ಅಂಗಡಿಯಲ್ಲಿ (ಸೊಸಾಯಟಿ) ಪಡಿತರ ಪಡೆಯಲು ಹೋದಾಗ ಬಯೋಮೆಟ್ರಿಕ್ ಹಾಗೂ ಒಟಿಪಿ (OTP) ಬರದೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಇಂಟರ್ನೆಟ್ ಕೈಕೊಡುವುದರಿಂದ ಬಡ ಜನರಿಗೆ ಸಕಾಲದಲ್ಲಿ ರೇಷನ್ ಸಿಗುತ್ತಿಲ್ಲ. ಡಿಜಿಟಲ್ ಇಂಡಿಯಾ ಯೋಜನೆಯಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ, ಮೂಲಸೌಕರ್ಯದ ಕೊರತೆಯಿಂದಾಗಿ ಜನಸಾಮಾನ್ಯರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.

“ನಮ್ಮ ಓಟಿನ ಬೆಲೆಯಾದರೂ ಏನು?” – ಮತದಾರರ ಆಕ್ರೋಶ

ಈ ಭಾಗದ ಸಂಸದರನ್ನು ಸಾರ್ವಜನಿಕರು  ಹಲವು ಬಾರಿ ಭೇಟಿಯಾಗಿ ವಿನಂತಿಸಿದ್ದಾರೆ. ಹಿರಿಯ ನಾಯಕರು ಭರವಸೆ ನೀಡಿ ಹೋಗುತ್ತಾರೆಯೇ ವಿನಃ ಬಿಎಸ್ಎನ್‌ಎಲ್ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. “ಒಂದು ಸಣ್ಣ ಟವರ್ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದಿದ್ದರೆ ನಮ್ಮ ಓಟಿಗೆ ಏನು ಬೆಲೆ ಇದೆ? ಚುನಾವಣಾ ಸಮಯದಲ್ಲಿ ಮತ ಕೇಳಲು ಬರುವ ನಾಯಕರು, ಗೆದ್ದ ಮೇಲೆ ಇತ್ತ ತಿರುಗಿಯೂ ನೋಡುವುದಿಲ್ಲ” ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ . ತಾಲೂಕಿನ ಇನ್ನೂ ಹಲವು ಕಡೆಗಳಲ್ಲಿ ಮಂಜೂರಾದ ಬಿಎಸ್ಎನ್‌ಎಲ್ ಟವರ್‌ಗಳನ್ನು ಇದುವರೆಗೂ ನಿರ್ಮಿಸದೆ ಬಾಕಿ ಉಳಿಸಿಕೊಳ್ಳಲಾಗಿದ್ದು, ಗ್ರಾಮೀಣ ಭಾಗದ ಜನರ ಅಸಮಾಧಾನ ಸ್ಫೋಟಗೊಳ್ಳುವ ಹಂತ ತಲುಪಿದೆ.

Leave a Reply

Your email address will not be published. Required fields are marked *