ಮದನೂರಿನ ಶ್ರೀ ಗ್ರಾಮದೇವಿ ಸಹಕಾರಿ ಸಂಘದಲ್ಲಿ ಸಡಗರದ ಸ್ವಾತಂತ್ರೋತ್ಸವ: ದೇಶಪ್ರೇಮದ ಸಂದೇಶ ನೀಡಿದ ಅಧ್ಯಕ್ಷ ಮಹೇಶ ದೇಸಾಯಿ ಕಳಸೂರ

ಹಂಚಿಕೊಳ್ಳಿ

ಯಲ್ಲಾಪುರ : “ನಮ್ಮ ದೇಶದ ಸ್ವಾತಂತ್ರ್ಯವು ಸುಲಭವಾಗಿ ಸಿಕ್ಕಿದ್ದಲ್ಲ. ಬ್ರಿಟಿಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಲು ಲಕ್ಷಾಂತರ ಕ್ರಾಂತಿಕಾರಿಗಳು, ಮಹನೀಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ್ದಾರೆ. ಅಂತಹ ವೀರರ ತ್ಯಾಗ ಮತ್ತು ಬಲಿದಾನವನ್ನು ಸದಾ ಸ್ಮರಿಸುತ್ತಾ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ” ಎಂದು ಶ್ರೀ ಗ್ರಾಮದೇವಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಮದನೂರು ( ಹುಣಶೆಟ್ಟಿಕೊಪ್ಪ) ಅಧ್ಯಕ್ಷರಾದ ಮಹೇಶ ದೇಸಾಯಿ ಕಳಸೂರ ಹೇಳಿದರು.


ಅವರು ಇಲ್ಲಿನ ಶ್ರೀ ಗ್ರಾಮದೇವಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ಹಮ್ಮಿಕೊಳ್ಳಲಾಗಿದ್ದ 80 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ  ಮಾತನಾಡಿದರು.


ದೇಶದ ಪ್ರಗತಿಯಲ್ಲಿ ಗ್ರಾಮೀಣ ಭಾಗದ ಕೊಡುಗೆಯನ್ನು ಉಲ್ಲೇಖಿಸಿದ ಅವರು, “ಮಹಾತ್ಮ ಗಾಂಧೀಜಿಯವರು ಹೇಳಿದಂತೆ ಭಾರತದ ಆತ್ಮ ಹಳ್ಳಿಗಳಲ್ಲಿದೆ. ರೈತರು ಮತ್ತು ಯೋಧರು ದೇಶದ ಎರಡು ಕಣ್ಣುಗಳಿದ್ದಂತೆ. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಸಹಕಾರಿ ರಂಗವು ಗ್ರಾಮೀಣ ಜನತೆಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ನಾವೆಲ್ಲರೂ ಜಾತಿ, ಮತ ಭೇದ ಮರೆತು ಒಗ್ಗಟ್ಟಿನಿಂದ ಶ್ರಮಿಸಿದಾಗ ಮಾತ್ರ ದೇಶವನ್ನು ಮತ್ತಷ್ಟು ಪ್ರಗತಿ ಪಥದತ್ತ ಕೊಂಡೊಯ್ಯಲು ಸಾಧ್ಯ” ಎಂದು ಕರೆ ನೀಡಿದರು.

ಈ ಸಂಧರ್ಭದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರಾದ ನಾಮದೇವ ಪುಂಡಲಿಕ ಶಿರನಾಳಕರ, ಗಣಪತಿ ಬಾಳಾ ಮರಾಠಿ, ಪ್ರದೀಪ ದಿವಾಕರ ಹೆಗಡೆ, ಪಾಂಡುರಂಗ ತಾನಾಜಿ ತಿನ್ನೆಕರ, ಕೃಷ್ಣ ಬಾಳಾ ಮರಾಠಿ,ವಿಲಿಯ್ಂ ಪೆದ್ರು ಸಿದ್ದಿ, ಈರಪ್ಪ ರಾಮ ಕಾಂಬಳೆ, ಶೋಭಾ ಸುರೇಶ ಕಾಂಬಳೆ ಹಾಗೂ ಪ್ರಕಾಶ ಅರ್ಜುನ ಶಾಪುರಕರ ಉಪಸ್ಥಿತರಿದ್ದರು.


ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಮಂಜುನಾಥ ಕೃಷ್ಣ ಮರಾಠಿ, ಸಿಬ್ಬಂದಿಗಳಾದ ಅಜಿತಕುಮಾರ್ ಕಾಂಬಳೆ, ಸೋಮಲಿಂಗ ತೊರಸ್ಕರ ಮತ್ತು ವಾಗು ವರಕ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದು, ಶಾಲಾ ಮಕ್ಕಳ ದೇಶಭಕ್ತಿಗೀತೆ ,ರಾಷ್ಟ್ರಗೀತೆ ಹಾಡುವ ಮೂಲಕ ಭಾರತ ಮಾತಾ ಕೀ ಜೈ ಎಂಬ ಘೋಷಣೆಗಳೊಂದಿಗೆ ದೇಶಭಕ್ತಿಯ ಸಂಭ್ರಮವನ್ನು ಹಂಚಿಕೊಂಡರು.

Leave a Reply

Your email address will not be published. Required fields are marked *