ಹಳ್ಳಿನ್ಯೂಸ್ ಫಲಶೃತಿ: ಇಡಗುಂದಿ-ಚಿನ್ನಾಪುರ ಹೆದ್ದಾರಿಯಲ್ಲಿದ್ದ ಬಸ್ ಕೊನೆಗೂ ತೆರವು! “ಹಳ್ಳಿನ್ಯೂಸ್” ಗೆ ಧನ್ಯವಾದ ತಿಳಿಸಿದ ಸ್ಥಳಿಯರು…..

ಹಂಚಿಕೊಳ್ಳಿ

ಯಲ್ಲಾಪುರ: ಸಾರ್ವಜನಿಕರ ಜೀವಕ್ಕೆ ಕುತ್ತು ತರುತ್ತಿದ್ದ ಇಡಗುಂದಿ – ಚಿನ್ನಾಪುರ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್‌ನ ಅವಾಂತರದ ಕುರಿತು ‘ಹಳ್ಳಿನ್ಯೂಸ್’ ಬಿತ್ತರಿಸಿದ ವರದಿ ಅಂತಿಮವಾಗಿ ಇಲಾಖೆಯ ಕಣ್ಣು ತೆರೆಸಿದೆ. ದೀರ್ಘಾವಧಿಯ ಮೌನದ ನಂತರ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ನಿಲ್ದಾಣದ ಮುಂಭಾಗದಲ್ಲೇ ಅಪಾಯಕಾರಿಯಾಗಿ ನಿಲ್ಲಿಸಲಾಗಿದ್ದ ಆನಂದ್ ಟ್ರಾವೆಲ್ಸ್ ಸಂಸ್ಥೆಯ ಬೃಹತ್ ಖಾಸಗಿ ಬಸ್ಸನ್ನು ಕೊನೆಗೂ ರಸ್ತೆಯಿಂದ ತೆರವುಗೊಳಿಸಿದೆ. ಈ ಮೂಲಕ ಸಾರ್ವಜನಿಕರ ಸುದೀರ್ಘ ಹೋರಾಟ ಹಾಗೂ ಆಕ್ರೋಶಕ್ಕೆ ಜಯ ಸಿಕ್ಕಂತಾಗಿದೆ.

ಅಕ್ಷರಶಃ ಶಾಪವಾಗಿದ್ದ ಬಸ್ ನಿಲ್ದಾಣಕ್ಕೆ ಮುಕ್ತಿ!

ಕೈಗಾ-ಇಳಕಲ್ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಸಂಧಿಸುವ ಅತ್ಯಂತ ಕಡಿದಾದ ತಿರುವಿನಲ್ಲೇ ಈ ಬಸ್ ನಿಂತಿತ್ತು. ಇದರಿಂದಾಗಿ ಚಿನ್ನಾಪುರ ಬಸ್ ನಿಲ್ದಾಣದ ಮುಂಭಾಗ ಸಂಪೂರ್ಣವಾಗಿ ಮರೆಯಾಗಿತ್ತು. ನಿಲ್ದಾಣದೊಳಗೆ ಕುಳಿತರೆ ಬಸ್ಸು ಬರುವುದು ಕಾಣುತ್ತಿರಲಿಲ್ಲ, ಇತ್ತ ರಸ್ತೆಗೆ ಬಂದರೆ ವೇಗವಾಗಿ ಧಾವಿಸುವ ವಾಹನಗಳು ಡಿಕ್ಕಿ ಹೊಡೆಯುವ ಭೀತಿ ಇತ್ತು. ‘ಹಳ್ಳಿನ್ಯೂಸ್’ ಈ ನರಕಯಾತನೆಯನ್ನು ಅತ್ಯಂತ ಗಂಭೀರವಾಗಿ ಬಿಂಬಿಸಿ, ಅಧಿಕಾರಿಗಳ ಬೇಜವಾಬ್ದಾರಿತನವನ್ನು ಸಾರ್ವಜನಿಕರ ಮುಂದೆ ಅನಾವರಣಗೊಳಿಸಿತ್ತು. 

ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ವಾಹನ ತೆರವು ಪ್ರಕ್ರಿಯೆ ನಡೆಸಿದ್ದಾರೆ. ಖಾಸಗಿ ಬಸ್ ಮಾಲೀಕನ ಹಿತರಕ್ಷಣೆಗಿಂತ ಸಾರ್ವಜನಿಕರ ಸುರಕ್ಷತೆಯೇ ಮುಖ್ಯ ಎಂಬುದನ್ನು ಇಲಾಖೆ ಕೊನೆಗೂ ಸಾಬೀತುಪಡಿಸಬೇಕಾಗಿ ಬಂತು.

ಸಾರ್ವಜನಿಕರ ಹರ್ಷ, ‘ಹಳ್ಳಿನ್ಯೂಸ್’ಗೆ ಕೃತಜ್ಞತೆ”

ದಿನನಿತ್ಯ ಪ್ರಾಣ ಕೈಯಲ್ಲಿ ಹಿಡಿದು ಬಸ್ಸಿಗಾಗಿ ಕಾಯುತ್ತಿದ್ದ ನಮಗೆ ಈ ತೆರವು ಕಾರ್ಯಾಚರಣೆ ದೊಡ್ಡ ನಿರಾಳತೆ ತಂದಿದೆ. ಜನರ ನೋವಿಗೆ ಸ್ಪಂದಿಸಿ ಇಲಾಖೆಯನ್ನು ನಿದ್ದೆಯಿಂದ ಎಬ್ಬಿಸಿದ ‘ಹಳ್ಳಿನ್ಯೂಸ್’ ಮಾಧ್ಯಮಕ್ಕೆ ನಮ್ಮ ಧನ್ಯವಾದಗಳು” ಎಂದು ಸ್ಥಳೀಯ ನಿವಾಸಿಗಳು ಹಾಗೂ ಪ್ರಯಾಣಿಕರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕೇವಲ ದಂಡ ವಿಧಿಸುವುದಷ್ಟೇ ಅಲ್ಲ, ತಕ್ಷಣವೇ ರಸ್ತೆ ಸುರಕ್ಷತೆಗೆ ಕ್ರಮ ಕೈಗೊಳ್ಳುವುದು ಇಲಾಖೆಯ ಕರ್ತವ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.

Leave a Reply

Your email address will not be published. Required fields are marked *