ಯಲ್ಲಾಪುರ : ಕಾನೂನು ಸುವ್ಯವಸ್ಥೆ ಮತ್ತು ರಸ್ತೆ ಸುರಕ್ಷತೆಯ ಪಾಠ ಮಾಡುವ ಪೊಲೀಸ್ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಲ್ಲಾಪುರ ತಾಲೂಕಿನ ಇಡಗುಂದಿ – ಚಿನ್ನಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಂಕ್ಷನ್‌ನಲ್ಲಿ ಅಕ್ಷರಶಃ ನಿದ್ರಾವಸ್ಥೆಗೆ ಜಾರಿವೆ. ಕಳೆದ ಎರಡು ವಾರದಿಂದ ಸಾರ್ವಜನಿಕರ ಜೀವಕ್ಕೆ ಕುತ್ತು ತರುತ್ತಿರುವ ಖಾಸಗಿ ಬಸ್ಸನ್ನು ರಸ್ತೆಯಿಂದ ತೆರವುಗೊಳಿಸಲು ಇಲಾಖೆಯ ಅಧಿಕಾರಿಗಳಿಗೆ ಇದುವರೆಗೂ ಪುರುಸೊತ್ತಿಲ್ಲದಿರುವುದು ಇಲಾಖೆಯ ತೀವ್ರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ದಿನದ ಇಪ್ಪತ್ತನಾಲ್ಕೂ ಗಂಟೆ ಹದ್ದಿನ ಕಣ್ಣಿಡಬೇಕಾದ ಪೊಲೀಸರು ಮತ್ತು ಹೆದ್ದಾರಿ ಗಸ್ತು ವಾಹನಗಳು ನಿತ್ಯವೂ ಇದೇ ರಸ್ತೆಯಲ್ಲಿ ಸಾಗುತ್ತಿದ್ದರೂ, ನಿಲ್ದಾಣದೆದುರೇ ಅಪಾಯ ಸೃಷ್ಟಿಸುವ ಸ್ಥಳದಲ್ಲಿ ಕಣ್ಣೆದುರೇ ಕಾಣುವ ಬೃಹತ್ ಬಸ್ ಇಲಾಖೆಯ ಕಣ್ಣಿಗೆ ಬಿದ್ದಿಲ್ಲದಿರುವುದು ಸಾರ್ವಜನಿಕರಲ್ಲಿ ಸಾಲು ಸಾಲು ಅನುಮಾನಗಳನ್ನು ಹುಟ್ಟುಹಾಕಿದೆ.
ಹೆದ್ದಾರಿಯ ತಿರುವಿನಲ್ಲಿ ಅಥವಾ ಜಂಕ್ಷನ್‌ಗಳಲ್ಲಿ ಹಾಳಾದ ವಾಹನಗಳನ್ನು ನಿಲ್ಲಿಸುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮಗಳಿವೆ. ಆದರೆ, ಆನಂದ್ ಟ್ರಾವೆಲ್ಸ್ ಸಂಸ್ಥೆಯ ಈ ಬಸ್ ರಸ್ತೆ ಸುರಕ್ಷತೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದರೂ ಇಲಾಖೆ ಮೌನಕ್ಕೆ ಶರಣಾಗಿದೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಅಧಿಕಾರಿಗಳು, ಜನರ ದೈನಂದಿನ ಸಮಸ್ಯೆಗಳಿಗೆ ಸ್ಪಂದಿಸದೆ ಇಷ್ಟೊಂದು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.
ನಿದ್ರೆಯಲ್ಲಿದ್ದಾರಾ ಹೈವೆ ಪೆಟ್ರೋಲ್ ಹಾಗೂ ಬೀಟ್ ಪೊಲೀಸ್ ಸಿಬ್ಬಂದಿ??
ಪ್ರಸ್ತುತ ವಾಹನ ನಿಲ್ಲಿಸಿರುವ ಚಿನ್ನಾಪುರ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಾಗಿದ್ದು ಇಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಚಲಿಸುತ್ತವೆ. ಹಾಗೇಯೆ ಅಲ್ಲಂದಲೆ ಕೈಗಾ ಇಳಕಲ್ ರಾಜ್ಯ ಹೆದ್ದಾರಿ ಸಹ ಹೋಗಿದ್ದು ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಗೆ ಬರುವ ಹಾಗೂ ಹೋಗುವ ವಾಹನಗಳಿಗೆ ಪ್ರತಿನಿತ್ಯ ಅಪಾಯದ ಕರೆಗಂಟೆ ಹೊಡೆಯುತ್ತಿರುತ್ತದೆ. ಆದರೆ ಇದನ್ನು ಗಮನಿಸದ ಬೀಟ್ ಪೊಲೀಸ್ ಸಿಬ್ಬಂದಿ ಹಾಗೂ ಹೈವೆ ಪೆಟ್ರೋಲ್ ಅಧಿಕಾರಿಗಳು ಗಾಢ ನಿದ್ರೆಯಲ್ಲಿದ್ದಾರಾ? ಅಥವಾ ವಾಹನ ತೆಗೆಸಲು ಇನ್ನೆನ್ನಾದರೂ ಅವಶ್ಯಕತೆ ಇದೆಯೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಮೊದಲೆ ಎಚ್ಚರಿಸಿದ್ದ *ಹಳ್ಳಿನ್ಯೂಸ್*
ಇಲ್ಲಿ ವಾಹನ ನಿಲ್ಲಿಸಿದ್ದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಆಗುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ಆಧಾರದ ಮೇಲೆ “ಹಳ್ಳಿನ್ಯೂಸ್ ” ಸ್ಥಳಕ್ಕಾಗವಿಸಿ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಆದರೆ ಇಲಾಖೆ ಗಾಢ ನಿದ್ರೆಯಲ್ಲಿರುವ ಕಾರಣ ವರದಿ ಅವರಿಗೆ ತಲುಪಿಲ್ಲವೇ ಅಥವಾ ಮಾಧ್ಯಮಗಳಲ್ಲಿ ಬರುತ್ತಿರುತ್ತದೆ ಎಂದು ನಿಷ್ಕಾಳಜಿ ಮಾಡಿದರೆ ? ಅಥವಾ ಯಾವುದಾದರು ಅಪಘಾತ ಸಂಭವಿಸಿದ ಮೇಲೆ ತೆರವು ಮಾಡೊಣ ಅಂತ ಸುಮ್ಮನಿದ್ದಾರಾ ಎನ್ನುವ ಪ್ರಶ್ನೆಗೆ ಇಲಾಖೆಯೆ ಉತ್ತರಿಸಬೇಕಿದೆ.
ಪ್ರಯಾಣಿಕರ ಪಾಲಿಗೆ ಶಾಪವಾದ ಬಸ್ ನಿಲ್ದಾಣ…..
ಚಿನ್ನಾಪುರ ಬಸ್ ನಿಲ್ದಾಣದ ಮುಂಭಾಗವನ್ನೇ ಸಂಪೂರ್ಣವಾಗಿ ಆವರಿಸಿಕೊಂಡಿರುವ ಈ ಬಸ್ಸಿನಿಂದಾಗಿ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ನಿಲ್ದಾಣದೊಳಗೆ ಕುಳಿತರೆ ಬಸ್ಸು ಬರುವುದು ಕಾಣುವುದಿಲ್ಲ, ರಸ್ತೆಯ ಮೇಲೆ ನಿಂತರೆ ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆಯುವ ಭೀತಿ ಎದುರಾಗಿದೆ. ಕೇವಲ ಬಸ್ ಮಾಲೀಕನ ಹಿತರಕ್ಷಣೆಗಾಗಿ ಇಡೀ ಊರಿನ ಪ್ರಯಾಣಿಕರನ್ನು ಬಸ್ ತಪ್ಪಿಸಿಕೊಳ್ಳುವಂತೆ ಮಾಡಿರುವುದು ಪೊಲೀಸರ ಕರ್ತವ್ಯಲೋಪಕ್ಕೆ ಸಾಕ್ಷಿಯಾಗಿದೆ.
ಸರಣಿ ಅಪಘಾತ ಸಂಭವಿಸಿದರೆ ಹೊಣೆ ಯಾರು?
ಈ ಜಾಗವು ಕೈಗಾ-ಇಳಕಲ್ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಸಂಧಿಸುವ ಪ್ರಮುಖ ತಿರುವಾಗಿದೆ. ಭಾರೀ ವಾಹನಗಳ ಸಂಚಾರವಿರುವ ಈ ಜಂಕ್ಷನ್‌ನಲ್ಲಿ ಎದುರಿನಿಂದ ಬರುವ ವಾಹನಗಳು ಕಾಣದೆ ಅಡ್ಡಿಯಾಗುತ್ತಿರುವ ಬಸ್ಸಿನಿಂದಾಗಿ ಯಾವುದೇ ಕ್ಷಣದಲ್ಲಾದರೂ ದೊಡ್ಡ ಮಟ್ಟದ ಸರಣಿ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಒಂದು ವೇಳೆ ಇಂತಹ ಘೋರ ದುರಂತ ಸಂಭವಿಸಿದರೆ, ಅದಕ್ಕೆ ಸ್ಥಳೀಯ ಪೊಲೀಸ್ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಹೊಣೆ ಹೊರುತ್ತದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ .
ಇನ್ನಾದರೂ ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಂಡು, ಈ ಬಸ್ಸನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಂಡು ರಸ್ತೆಯಿಂದ ತೆರವುಗೊಳಿಸಬೇಕಾಗಿದೆ. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಖಾಕಿ ಪಡೆಯೇ ಸಾರ್ವಜನಿಕರ ನ್ಯಾಯಾಲಯದಲ್ಲಿ ಉತ್ತರಿಸಬೇಕಾಗುತ್ತದೆ ಎಂಬುದನ್ನು “ಹಳ್ಳಿನ್ಯೂಸ್ ” ಮತ್ತೆ ನೆನಪಿಸುತ್ತಿದೆ.













Leave a Reply