ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಪಂಚಾಯತ್ ವ್ಯಾಪ್ತಿಯ ಬೀಗಾರ-ತಾರಗಾರ ಗ್ರಾಮದಲ್ಲಿ ಸಾರ್ವಜನಿಕರ ಜೀವಕ್ಕೆ ಕುತ್ತಾಗಿದ್ದ ಜೋತುಬಿದ್ದ ವಿದ್ಯುತ್ ತಂತಿಗಳ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಈ ಕುರಿತು ‘ಹಳ್ಳಿನ್ಯೂಸ್’ ಪ್ರಕಟಿಸಿದ್ದ ವಿಶೇಷ ವರದಿಗೆ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದು, ಸ್ಥಳದಲ್ಲಿ ಹೊಸ ಕಂಬಗಳನ್ನು ಅಳವಡಿಸಿ ತಂತಿಗಳನ್ನು ಬಿಗಿಗೊಳಿಸುವ ಮೂಲಕ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ.
ವರದಿಯ ಹಿನ್ನೆಲೆ:
ಬೀಗಾರ ಮತ್ತು ತಾರಗಾರ ಗ್ರಾಮಗಳ ತೋಟ ಸಮೀಪ ಹಾದುಹೋಗಿದ್ದ ವಿದ್ಯುತ್ ತಂತಿಗಳು ತೀರಾ ಕೆಳಮಟ್ಟಕ್ಕೆ ಜೋತುಬಿದ್ದಿದ್ದವು. ಗಾಳಿ-ಮಳೆ ಬಂದಾಗ ತಂತಿಗಳು ಒಂದಕ್ಕೊಂದು ತಾಗಿ ಕಿಡಿ ಹಾರಿಸುತ್ತಿದ್ದವು. ಸಾರ್ವಜನಿಕರು ಕೈ ಎತ್ತಿ ಮುಗಿದರೆ ಯಮಲೋಕಕ್ಕೆ ಟಿಕೆಟ್ ಸಿಗುವಷ್ಟರ ಮಟ್ಟಿಗೆ ಪ್ರಾಣಭಯ ಸೃಷ್ಟಿಸಿದ್ದ ಈ ಜ್ವಲಂತ ಸಮಸ್ಯೆಯ ಕುರಿತು ‘ಹಳ್ಳಿನ್ಯೂಸ್’ ಮಾಧ್ಯಮವು “ಗಾಳಿ ಬಂದ್ರೆ ವಿದ್ಯುತ್ ತಂತಿಗಳ ರೋಮ್ಯಾಂಟಿಕ್ ಡಾನ್ಸ್! ಹೆಸ್ಕಾಂ ಅಧಿಕಾರಿಗಳ ಕಣ್ಣಿಗೆ ಬೀಳದ ಲವ್ ಸ್ಟೋರಿ” ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು
ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಯಲ್ಲಾಪುರದ ಹೆಸ್ಕಾಂ ಇಲಾಖೆಯ ಸೆಕ್ಷನ್ ಆಫಿಸರ್ ಲಕ್ಷ್ಮಣ ಹಾಗೂ ಸ್ಥಳಿಯ ಲೈನ್ ಮೇನ್ ಪರಶುರಾಮ ಹಾಗೂ ಮುನ್ನಾ ತಕ್ಷಣವೇ ಬೀಗಾರ-ತಾರಗಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಾಯದ ತೀವ್ರತೆಯನ್ನು ಅರಿತು, ಕಾರ್ಯಪ್ರವೃತ್ತರಾಗಿ ಇಲಾಖೆಯ ವತಿಯಿಂದ ಹೊಸ ವಿದ್ಯುತ್ ಕಂಬಗಳನ್ನು ತರಿಸಿ, ಅವುಗಳನ್ನು ಸೂಕ್ತ ಜಾಗದಲ್ಲಿ ನೆಟ್ಟು, ಜೋತುಬಿದ್ದಿದ್ದ ಅಪಾಯಕಾರಿ ತಂತಿಗಳನ್ನು ಎಳೆದು ಬಿಗಿಗೊಳಿಸಿದ್ದಾರೆ.
ಇನ್ನುಳಿದ ಕಡೆಯೂ ಕ್ರಮದ ಭರವಸೆ:
ಈ ಕುರಿತು ಪ್ರತಿಕ್ರಿಯಿಸಿರುವ ಹೆಸ್ಕಾಂ ಅಧಿಕಾರಿಗಳು, “ಸದ್ಯ ವರದಿಯಾದ ಕಡೆಗಳಲ್ಲಿ ಹೊಸ ಕಂಬಗಳನ್ನು ಅಳವಡಿಸಿ ಸಾರ್ವಜನಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಗೆ, ತಾಲೂಕಿನ ಇನ್ನುಳಿದ ಭಾಗಗಳಲ್ಲೂ ಎಲ್ಲಿಯಾದರೂ ವಿದ್ಯುತ್ ತಂತಿಗಳು ಜೋತುಬಿದ್ದಿರುವುದು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ, ತಕ್ಷಣ ಇಲಾಖೆಗೆ ಮಾಹಿತಿ ನೀಡಬೇಕು. ಅಂತಹ ಜಾಗಗಳಲ್ಲೂ ದುರಸ್ತಿ ಕಾರ್ಯ ನಡೆಸಿ ಸರಿಪಡಿಸಲಾಗುವುದು,” ಎಂದು ಭರವಸೆ ನೀಡಿದ್ದಾರೆ.
‘ಹಳ್ಳಿನ್ಯೂಸ್’ ವರದಿಯ ಪರಿಣಾಮದಿಂದಾಗಿ ನೆನೆಗುದಿಗೆ ಬಿದ್ದಿದ್ದ ಸಮಸ್ಯೆ ಕೆಲವೇ ದಿನಗಳಲ್ಲಿ ಬಗೆಹರಿದಿದ್ದು, ಸ್ಥಳಿಯ ಮುಖಂಡ ನವೀನ್ ಕಿರಗಾರಿ ಹೆಸ್ಕಾಂ ಅಧಿಕಾರಿಗಳ ಕ್ಷಿಪ್ರ ಕ್ರಮಕ್ಕೆ ಹಾಗೂ ಸಾರ್ವಜನಿಕರ ಪರವಾಗಿ ಧ್ವನಿ ಎತ್ತಿದ ‘ಹಳ್ಳಿನ್ಯೂಸ್’ ಮಾಧ್ಯಮಕ್ಕೆ ಧನ್ಯವಾದ ಸಮರ್ಪಿಸಿದ್ದಾರೆ.













Leave a Reply