
ಯಲ್ಲಾಪುರ : ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಮೇಯುತ್ತಿದ್ದ ಜಾನುವಾರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತಾಲೂಕಿನ ವಜ್ರಳ್ಳಿ ಪಂಚಾಯತ್ ವ್ಯಾಪ್ತಿಯ ಈರಾಪುರದಲ್ಲಿ ಶುಕ್ರವಾರ ಸಂಭವಿಸಿದೆ.
ಘಟನೆಯ ವಿವರ:
ಈರಾಪುರದ ನಿವಾಸಿ ಮಂಜುನಾಥ ಮಹಾಬಲೇಶ್ವರ ಭಟ್ ಗಂಗೆಮನೆ ಅವರಿಗೆ ಸೇರಿದ ಜಾನುವಾರು ಇದಾಗಿದೆ. ಬೆಣ (ಹುಲ್ಲುಗಾವಲು) ಒಂದರಲ್ಲಿ ಜಾನುವಾರು ಎಂದಿನಂತೆ ಮೇಯುತ್ತಿದ್ದಾಗ, ಅನಿರೀಕ್ಷಿತವಾಗಿ ಮೇಲಿದ್ದ ವಿದ್ಯುತ್ ತಂತಿ ತುಂಡಾಗಿ ಅದರ ಮೇಲೆ ಬಿದ್ದಿದೆ. ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದ ಕಾರಣ ಜಾನುವಾರು ಸ್ಥಳದಲ್ಲೇ ಕೊನೆಯುಸಿರೆಳೆದಿದೆ.
ಅಧಿಕಾರಿಗಳ ಭೇಟಿ:
ವಿಷಯ ತಿಳಿಯುತ್ತಿದ್ದಂತೆ ಪಶುವೈದ್ಯಾಧಿಕಾರಿ ಕೆ ಜಿ ಹೆಗಡೆ , ಹೆಸ್ಕಾಂ (HESCOM) ಇಲಾಖೆಯ ಎಸ್ ಓ ಲಕ್ಷಣ , ಸ್ಥಳೀಯ ಲೈನ್ ಮೆನ್ ಪರಶುರಾಮ, ಮುನ್ನಾ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪಶುವೈದ್ಯರು ಮೃತ ಜಾನುವಾರಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಪರಿಹಾರಕ್ಕೆ ಆಗ್ರಹ:
ಕೃಷಿಕ ಕುಟುಂಬಕ್ಕೆ ಆಸರೆಯಾಗಿದ್ದ ಜಾನುವಾರು ವಿದ್ಯುತ್ ತಂತಿ ತುಂಡಾಗಿ ಬಿದ್ದು ಸಾವನ್ನಪ್ಪಿದೆ . ತಕ್ಷಣವೇ ಮೃತ ಜಾನುವಾರಿನ ಮಾಲೀಕರಿಗೆ ಸೂಕ್ತ ನಷ್ಟ ಪರಿಹಾರವನ್ನು ವಿತರಿಸಬೇಕು ಎಂದು ಸ್ಥಳೀಯರಾದ ಶಿವಪ್ರಸಾದ ಭಟ್ ಗಂಗೆಮನೆ, ಪ್ರಸನ್ನ ಹೆಗಡೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ















Leave a Reply