ಯಲ್ಲಾಪುರ: ಪಟ್ಟಣದ ಸೌಂದರ್ಯೀಕರಣಕ್ಕಾಗಿ ಕಳೆದ 2023 ರಲ್ಲಿ ಲೋಕೋಪಯೋಗಿ ಇಲಾಖೆಯ (PWD) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೋಟ್ಯಾಂತರ ರೂಪಾಯಿ ವೆಚ್ಚದ ಅಲಂಕಾರಿಕ ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ಕಳಪೆ ಗುಣಮಟ್ಟದ ಕೆಲಸ ನಡೆದಿದೆ ಎಂದು ಮಾಜಿ ಪ.ಪಂ. ಮಾಜಿ ಸದಸ್ಯ , ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ್ ಅವರು ಗಂಭೀರ ಆರೋಪ ಮಾಡಿದ್ದಾರೆ.

ಯಲ್ಲಾಪುರ ನಗರ ವ್ಯಾಪ್ತಿಯಲ್ಲಿ ಅಳವಡಿಸಿರುವ ಅಲಂಕಾರಿಕ ದೀಪಗಳು ಕೆಲವೆ ತಿಂಗಳು ಸುಮಾರು 100 ಕ್ಕೂ ಹೆಚ್ಚು ದೀಪಗಳು ಕೆಟ್ಟು ಹೋಗಿದ್ದು, ರಾತ್ರಿ ಸಮಯದಲ್ಲಿ ಇಡೀ ನಗರ ಕತ್ತಲಲ್ಲಿ ಮುಳುಗುವಂತಾಗಿದೆ. ಅಷ್ಟೇ ಅಲ್ಲದೆ, ವಿದ್ಯುತ್ ಸಂಪರ್ಕಕ್ಕಾಗಿ ಭೂಗತ (Underground) ಮಾರ್ಗದ ಮೂಲಕ ಅಳವಡಿಸಲಾಗಿದ್ದ ಕೇಬಲ್ಗಳು ಅಲ್ಲಲ್ಲಿ ಕಿತ್ತು ರಸ್ತೆಯ ಮೇಲ್ಭಾಗಕ್ಕೆ ಬಂದಿದ್ದು, ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುವಂತಿವೆ. ಕೆಲವೊಂದು ಕಡೆ ಪಿ ವಿ ಸಿ ಪೈಪ್ ನ ಒಳಗೆ ವಿದ್ಯುತ್ ಕೆಬಲ್ ಅಳವಡಿಸಿದ್ದು ಅದನ್ನು ಪುಟ್ ಪಾತ್ ಕಂಬಕ್ಕೆ ಒರಗಿಸಿ ಇಟ್ಟಿದ್ದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಜೀವ ಅಪಾಯದಲ್ಲಿದೆ. ಈ ಎಲ್ಲಾ ಅಂಶಗಳು ಕಾಮಗಾರಿಯ ಕಳಪೆ ಗುಣಮಟ್ಟಕ್ಕೆ ಜ್ವಲಂತ ಸಾಕ್ಷಿಯಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಲು ನಿರಾಕರಣೆ:
ಈ ಯೋಜನೆಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಅರ್ಜಿದಾರರು ಸ್ಥಳೀಯ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯಡಿ (RTI) ಅರ್ಜಿ ಸಲ್ಲಿಸಿ, ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳನ್ನು ಕೋರಿದ್ದರು. ಆದರೆ, ಅಕ್ರಮಗಳು ಹೊರಬೀಳುವ ಭೀತಿಯಿಂದ ಅಧಿಕಾರಿಗಳು ಇದುವರೆಗೆ ಯಾವುದೇ ಮಾಹಿತಿಯನ್ನು ಪೂರೈಸದೆ ಉಡಾಫೆ ತೋರಿದ್ದಾರೆ. ಇದು ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕಳಪೆ ಕಾಮಗಾರಿಯ ಲೋಪದೋಷಗಳನ್ನು ಸರಿಪಡಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, “ಇದರ ನಿರ್ವಹಣೆ ಕಾರ್ಯ ಸ್ಥಳೀಯ ಪಟ್ಟಣ ಪಂಚಾಯತಿಗೆ ಸೇರಿದ್ದು” ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇತ್ತ ಪಟ್ಟಣ ಪಂಚಾಯತಿ ಅಧಿಕಾರಿಗಳನ್ನು ವಿಚಾರಿಸಿದರೆ, “ಕಾಮಗಾರಿಯು ಇನ್ನೂ ಸಂಪೂರ್ಣವಾಗಿ ಪೂರ್ಣಗೊಳ್ಳದ ಕಾರಣ ನಾವು ಇದನ್ನು ನಮ್ಮ ಸುಪರ್ದಿಗೆ ಹಸ್ತಾಂತರಿಸಿಕೊಂಡಿಲ್ಲ” ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳ ಈ ಬೇಜವಾಬ್ದಾರಿತನದಿಂದಾಗಿ ಸರ್ಕಾರದ ಕೋಟ್ಯಾಂತರ ರೂಪಾಯಿ ಹಣ ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಪೋಲಾಗುತ್ತಿದ್ದು, ಯೋಜನೆ ನೆನೆಗುದಿಗೆ ಬಿದ್ದಿದೆ.
ಈ ಇಡೀ ಹಗರಣದ ಕುರಿತು ತನಿಖೆ ನಡೆಸಲು ಒಂದು ವಿಶೇಷ ಸಮಿತಿಯನ್ನು ರಚಿಸಬೇಕು ಹಾಗೂ ಕಳಪೆ ಕಾಮಗಾರಿಗೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಅವರಿಗೆ ಲಿಖಿತ ದೂರು ಸಲ್ಲಿಸಲಾಗಿದೆ.
ಈ ದೂರಿನ ಪ್ರತಿಯನ್ನು ಜಿಲ್ಲಾಧಿಕಾರಿಗಳು (ಉತ್ತರ ಕನ್ನಡ) ಹಾಗೂ ಮಾನ್ಯ ಲೋಕಾಯುಕ್ತರಿಗೂ ಸೂಕ್ತ ಕ್ರಮಕ್ಕಾಗಿ ರವಾನಿಸಲಾಗಿದೆ. ಒಂದು ವೇಳೆ ಇಲಾಖೆಯು ಈ ಬಗ್ಗೆ ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಮೇಲಧಿಕಾರಿಗಳಿಗೆ ಅಧಿಕೃತವಾಗಿ ದೂರನ್ನು ಸಲ್ಲಿಸಿ ಕಾನೂನು ಹೋರಾಟ ಮಾಡುವುದಾಗಿ ಸೋಮು ನಾಯ್ಕ ಅವರು ಎಚ್ಚರಿಸಿದ್ದಾರೆ.















Leave a Reply