ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅಪರಾಧ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ ಹೊಸ ವರದಿಯಲ್ಲಿ ಬೆಂಗಳೂರಿನ ಅಸಲಿ ಬಂಡವಾಳ ಬಯಲಾಗಿದ್ದು, ದೇಶದಲ್ಲೇ ಅತ್ಯಂತ ಹೆಚ್ಚು ವರದಕ್ಷಿಣೆ ಕಿರುಕುಳ ಪ್ರಕರಣಗಳು ಇಲ್ಲಿ ದಾಖಲಾಗಿರುವುದು ಬೆಳಕಿಗೆ ಬಂದಿದೆ.
ವರದಕ್ಷಿಣೆ ನಿಷೇಧ ಕಾಯ್ದೆ (Dowry Prohibition Act) ಅಡಿಯಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ 878 ಪ್ರಕರಣಗಳು ದಾಖಲಾಗಿದ್ದು, ರಾಜ್ಯದ ಒಟ್ಟು ವರದಕ್ಷಿಣೆ ಪ್ರಕರಣಗಳ ಪೈಕಿ ಶೇಕಡಾ 87 ರಷ್ಟು ಕೇವಲ ಬೆಂಗಳೂರಿನಲ್ಲೇ ನಡೆದಿವೆ. ಗಂಡ ಹಾಗೂ ಅತ್ತೆ-ಮಾವಂದಿರ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಬೇಸತ್ತು ಮಹಿಳೆಯರು ಠಾಣೆ ಮೆಟ್ಟಿಲೇರುತ್ತಿದ್ದು, ನಗರದಲ್ಲಿ ಒಟ್ಟು 4,383 ವರದಕ್ಷಿಣೆ ಕಿರುಕುಳ ದೂರುಗಳು ದಾಖಲಾಗಿವೆ. ಇದರೊಂದಿಗೆ ಲೈಂಗಿಕ ಕಿರುಕುಳ ಸೇರಿದಂತೆ ಒಟ್ಟು ಮಹಿಳಾ ದೌರ್ಜನ್ಯ ಪ್ರಕರಣಗಳ ಸಂಖ್ಯೆ 6,237ಕ್ಕೆ ಏರಿಕೆಯಾಗಿದೆ.
ದೇಶದ ಒಟ್ಟು 19 ಮಹಾನಗರಗಳ ಅಂಕಿ-ಅಂಶಗಳನ್ನು ಗಮನಿಸಿದರೆ, ಒಟ್ಟು 8,40,905 ಅಪರಾಧ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಪತಿಯಿಂದ ನಡೆಯುವ ಕ್ರೌರ್ಯಕ್ಕೆ ಸಂಬಂಧಿಸಿದಂತೆ 50,584 (ಶೇ. 28.4) ಪ್ರಕರಣಗಳು ಹಾಗೂ ಮಕ್ಕಳ ಮೇಲಿನ ಅಪರಾಧಗಳಿಗೆ ಸಂಬಂಧಿಸಿದಂತೆ 24,377 (ಶೇ. 56.0) ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಅಪರಾಧಗಳ ಪ್ರಮಾಣದಲ್ಲಿ ಶೇಕಡಾ 10 ರಷ್ಟು ಹೆಚ್ಚಳವಾಗಿದೆ.
ಇದೇ ವೇಳೆ ತಂತ್ರಜ್ಞಾನ ನಗರಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ವ್ಯಾಪಕವಾಗಿ ಹೆಚ್ಚುತ್ತಿವೆ. ಒಂದೇ ವರ್ಷದಲ್ಲಿ 34,958 (ಶೇ. 3) ಸೈಬರ್ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಕಂಪ್ಯೂಟರ್ ಸಂಬಂಧಿತ ಅಪರಾಧಗಳೇ ಶೇ. 56.6 ರಷ್ಟಿವೆ. ಇದರೊಂದಿಗೆ ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದಂತೆ 42,747 (ಶೇ. 90.4), ಆಸ್ತಿ ಸಂಬಂಧಿತ 2,80,867 (ಶೇ. 87.9) ಹಾಗೂ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 4,107 (ಶೇ. 6.9) ಪ್ರಕರಣಗಳು ದಾಖಲಾಗಿವೆ ಎಂದು ಎನ್‌ಸಿಆರ್‌ಬಿ ವರದಿ ಎಚ್ಚರಿಸಿದೆ.

Leave a Reply