ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಪುನಾರಂಭ: ವಿದ್ಯಾರ್ಥಿಗಳಿಗೆ ನಿಯೋಜಿತ CM ಡಿಕೆಶಿ ಮಹತ್ವದ ಸಂದೇಶ..!

ಬೆಂಗಳೂರು: ಸುದೀರ್ಘ ಬೇಸಿಗೆ ರಜೆಯ ಬಳಿಕ ರಾಜ್ಯದಲ್ಲಿ ಇಂದಿನಿಂದ (ಜೂನ್ 1) 2026-27ನೇ ಸಾಲಿನ ಹೊಸ ಶೈಕ್ಷಣಿಕ ವರ್ಷ ಅಧಿಕೃತವಾಗಿ ಆರಂಭಗೊಂಡಿದೆ. ಶಾಲೆಗೆ ಮರಳುತ್ತಿರುವ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಣ ಇಲಾಖೆ ಮತ್ತು ಶಿಕ್ಷಕ ವೃಂದ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದೇ ಸಂದರ್ಭದಲ್ಲಿ ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ ವಿಶೇಷವಾಗಿ ಶುಭ ಹಾರೈಸಿದ್ದು, ಭವಿಷ್ಯದ ಶೈಕ್ಷಣಿಕ ನೀತಿಯ ಕುರಿತು ಮಾತನಾಡಿದ್ದಾರೆ.

ಹೊಸ ಶೈಕ್ಷಣಿಕ ವರ್ಷಕ್ಕೆ ಕಾಲಿಡುತ್ತಿರುವ ವಿದ್ಯಾರ್ಥಿಗಳಿಗೆ ಸಂದೇಶ ನೀಡಿರುವ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್, “ನನಗೆ ಶಿಕ್ಷಣ ಎಂದರೆ ಅತ್ಯಂತ ಪ್ರಿಯವಾದ ಕ್ಷೇತ್ರ. ಇವತ್ತು ಹೊಸ ಶೈಕ್ಷಣಿಕ ವರ್ಷಕ್ಕೆ ಕಾಲಿಡುತ್ತಿರುವ ನನ್ನ ಪ್ರೀತಿಯ ವಿದ್ಯಾರ್ಥಿಗಳು ಇಡೀ ದೇಶ ಮತ್ತು ವಿಶ್ವವೇ ತಿರುಗಿ ನೋಡುವಂತಹ ಸಾಧನೆ ಮಾಡಬೇಕು. ಜಗತ್ತಿನ ಪ್ರಮುಖ ವಿಶ್ವವಿದ್ಯಾಲಯಗಳಿಗೆ ಹೋಗಿ ಕಲಿಯುವಂತಾಗಬೇಕು” ಎಂದಿದ್ದಾರೆ.

“ಕರ್ನಾಟಕದಲ್ಲಿ ಅದ್ಭುತ ಮಾನವ ಸಂಪನ್ಮೂಲವಿದೆ. ಇಲ್ಲಿ ಅತ್ಯುತ್ತಮ ಲಾಯರ್, ಇಂಜಿನಿಯರ್‌ಗಳು ಇದ್ದಾರೆ. ಇಡೀ ಭಾರತ ದೇಶವೇ ಇಂದು ಕರ್ನಾಟಕದ ಕಡೆ ನೋಡುತ್ತಿದೆ. ಹೆಚ್‌ಎಎಲ್ (HAL), ಐಐಟಿ (IIT) ಹಾಗೂ ರಕ್ಷಣಾ ಇಲಾಖೆಯ ಪ್ರಮುಖ ಸಂಸ್ಥೆಗಳು ಇಲ್ಲೇ ಆರಂಭವಾಗಿವೆ. ಇಂತಹ ಹೆಮ್ಮೆಯ ಪರಂಪರೆಯನ್ನು ವಿದ್ಯಾರ್ಥಿಗಳಾದ ನೀವು ಮುಂದೆ ತೆಗೆದುಕೊಂಡು ಹೋಗಬೇಕು. ನಮ್ಮ ಸರ್ಕಾರದ ಹೊಸ ಶೈಕ್ಷಣಿಕ ಪಾಲಿಸಿಯನ್ನು ಶೀಘ್ರದಲ್ಲೇ ಪ್ರಕಟಿಸುತ್ತೇನೆ” ಎಂದು ಭರವಸೆ ನೀಡಿದ್ದಾರೆ.

ಇದೇ ವೇಳೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಅವರು, “ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಖಾಸಗಿ ಶಾಲೆಗಳಿಗಿಂತಲೂ ಅತ್ಯುತ್ತಮವಾಗಿ ನಮ್ಮ ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡಲಾಗುತ್ತಿದೆ” ಎಂದು ಹೇಳಿದ್ದಾರೆ.

ರಾಜಕೀಯ ಬೆಳವಣಿಗೆ ಎಫೆಕ್ಟ್: ಶಾಲಾ ಮಟ್ಟದಲ್ಲೇ ಆರಂಭೋತ್ಸವ!

ರಾಜ್ಯದಲ್ಲಿ ನಡೆದ ದಿಢೀರ್ ರಾಜಕೀಯ ವಿದ್ಯಮಾನಗಳು ಶಾಲಾ ಆರಂಭೋತ್ಸವದ ಮೇಲೂ ಪ್ರಭಾವ ಬೀರಿವೆ. ಈ ಹಿಂದೆ ಶಿಕ್ಷಣ ಇಲಾಖೆಯು ಅದ್ಧೂರಿಯಾಗಿ ರಾಜ್ಯಮಟ್ಟದ ಶಾಲಾ ಆರಂಭೋತ್ಸವ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಿತ್ತು. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸರ್ಜನೆಯಾಗಿದೆ. ಹೀಗಾಗಿ, ರಾಜ್ಯಮಟ್ಟದ ಬೃಹತ್ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದ್ದು, ಆಯಾ ಶಾಲಾ ಮಟ್ಟದಲ್ಲೇ ಸರಳ ಹಾಗೂ ಅರ್ಥಪೂರ್ಣವಾಗಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಆರಂಭೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬಿಸಿಯೂಟಕ್ಕೆ ಎಲ್‌ಪಿಜಿ ಕೊರತೆಯಾಗದಂತೆ ಕಟ್ಟುನಿಟ್ಟಿನ ಸೂಚನೆ:

ರಾಜ್ಯಾದ್ಯಂತ ಇಂದಿನಿಂದಲೇ ಸರ್ಕಾರಿ ಶಾಲೆಗಳು ಪುನಾರಂಭಗೊಳ್ಳುತ್ತಿರುವುದರಿಂದ, ಮಕ್ಕಳಿಗೆ ನೀಡಲಾಗುವ ಬಿಸಿಯೂಟದ ವ್ಯವಸ್ಥೆಗೆ ಯಾವುದೇ ಅಡ್ಡಿಯಾಗದಂತೆ ಶಿಕ್ಷಣ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ಶಾಲೆಗಳಲ್ಲಿ ಎಲ್‌ಪಿಜಿ (LPG) ಸಿಲಿಂಡರ್ ಕೊರತೆಯಾಗದಂತೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಲ್ಲಾ ಜಿಲ್ಲೆಗಳ ಡಿಡಿಪಿಐಗಳಿಗೆ (DDPI) ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *