ಬಿಡದಿ Township ಜಟಾಪಟಿ, JMC ಸರ್ವೇಗೆ ಅಡ್ಡಿಪಡಿಸಿದ 20ಕ್ಕೂ ಹೆಚ್ಚು ರೈತರ ವಿರುದ್ಧ ಎಫ್ಐಆರ್!

ರಾಮನಗರ ಜಿಲ್ಲೆಯ ಬಿಡದಿ ಟೌನ್‌ಶಿಪ್ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಜೆಎಂಸಿ (JMC) ಸರ್ವೇ ಕಾರ್ಯ ತೀವ್ರ ಸ್ವರೂಪ ಪಡೆದುಕೊಂಡಿದೆ. ಸರ್ವೇಗೆ ಅಡ್ಡಿಪಡಿಸಿ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಡಿ 20ಕ್ಕೂ ಹೆಚ್ಚು ರೈತರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಹಾಗೂ ಅಧಿಕಾರಿಗಳ ಮೇಲೆ ದೈಹಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಕಂದಾಯ ಇಲಾಖೆಯ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ರೈತರು, ಯಾವುದೇ ಕಾರಣಕ್ಕೂ ಜೆಎಂಸಿ ಸರ್ವೇ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಈ ನಡುವೆ ಇಂದೂ ಕೂಡ ಯೋಜನಾ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ರೈತರು ತೀವ್ರ ಎಚ್ಚರಿಕೆ ವಹಿಸಿದ್ದು, ಕಟ್ಟೆಚ್ಚರದಲ್ಲಿದ್ದಾರೆ. ಒಂದು ವೇಳೆ ಅಧಿಕಾರಿಗಳು ಜೆಎಂಸಿ ಸರ್ವೇ ಮುಂದುವರಿಸಿದರೆ ಮತ್ತೆ ತಡೆಯೊಡ್ಡಲು ರೈತರು ಸರ್ವ ಸನ್ನದ್ಧರಾಗಿದ್ದಾರೆ. ರೈತರ ಈ ತೀವ್ರ ವಿರೋಧ ಹಾಗೂ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ರಾಮನಗರ ಜಿಲ್ಲಾಡಳಿತವು ಸದ್ಯಕ್ಕೆ ಜೆಎಂಸಿ ಸರ್ವೇ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಮುಂದಿನ ದಿನಗಳಲ್ಲಿ ಪ್ರತಿಭಟನಾ ನಿರತ ರೈತರೊಂದಿಗೆ ಸಭೆ ನಡೆಸಿ, ಮಾತುಕತೆಯ ಮೂಲಕ ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕವೇ ಸರ್ವೇ ಆರಂಭಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಇದರ ಜೊತೆಗೆ, ಯೋಜನೆಗೆ ಸಹಮತ ವ್ಯಕ್ತಪಡಿಸಿರುವ ರೈತರ ಜಮೀನುಗಳಲ್ಲಿ ಹೆಚ್ಚಿನ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಸರ್ವೇ ಕಾರ್ಯ ನಡೆಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *