ಬೆಂಗಳೂರು: ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಅಧಿಕಾರ ವಹಿಸಿಕೊಂಡ ಕೇವಲ ಎರಡೇ ದಿನಕ್ಕೆ ಹೊಸ ಸರ್ಕಾರಕ್ಕೆ ಭಾರಿ ಬಂಡಾಯದ ಬಿಸಿ ತಟ್ಟಿದೆ. ತಮಗೆ ಇಷ್ಟವಿಲ್ಲದ ಜಲಸಂಪನ್ಮೂಲ ಖಾತೆಯನ್ನು ಹಂಚಿಕೆ ಮಾಡಿರುವುದಕ್ಕೆ ತೀವ್ರ ಆಕ್ರೋಶ ಹೊರಹಾಕಿರುವ ಹಿರಿಯ ನಾಯಕ ರಾಮಲಿಂಗಾರೆಡ್ಡಿ (Ramalinga Reddy) ಅವರು, ಕೋರಮಂಗಲದ ತಮ್ಮ ಕಚೇರಿಯಲ್ಲಿ ಕಾರ್ಯಕರ್ತರ ಮುಂಬಾಗದಲ್ಲೇ ಸಚಿವ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ. ಯಾರ ಮನವೊಲಿಕೆಗೂ ಬಗ್ಗದ ರೆಡ್ಡಿ, “ನನ್ನ ನಿರ್ಧಾರ ಅಚಲ, ಇನ್ಯಾರನ್ನೂ ಭೇಟಿಯಾಗುವ ಪ್ರಶ್ನೆಯೇ ಇಲ್ಲ” ಎಂದು ಹಠ ಹಿಡಿದಿರುವುದು ಸಿಎಂ ಡಿಕೆಶಿ ಪಾಲಿಗೆ ಆರಂಭದಲ್ಲೇ ಅತಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಬಿಕ್ಕಟ್ಟಿನ ಬೆನ್ನಲ್ಲೇ ಸಿಎಂ ಡಿಕೆಶಿ ಅವರು ಮಾಧ್ಯಮಗಳ ಮುಂದೆ ಬಂದು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ನನ್ನ ಆಪ್ತ ಸ್ನೇಹಿತರು; ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ:
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM DK Shivakumar) ಅವರು, ರಾಮಲಿಂಗಾರೆಡ್ಡಿ (Ramalinga Reddy) ಅವರ ರಾಜೀನಾಮೆ ವಿಚಾರವಾಗಿ ಉಂಟಾಗಿರುವ ಗೊಂದಲವನ್ನು ತಿಳಿಗೊಳಿಸಲು ಪ್ರಯತ್ನಿಸಿದರು. “ರಾಮಲಿಂಗಾರೆಡ್ಡಿಯವರು ನಮ್ಮ ಪಕ್ಷದ ಅತ್ಯಂತ ಹಿರಿಯ ನಾಯಕರು ಮತ್ತು ನನ್ನ ಆಪ್ತ ಸ್ನೇಹಿತರು. ಅಷ್ಟೇ ಅಲ್ಲದೆ ಅವರು ನನ್ನ ಆತ್ಮೀಯ ಸಹೋದ್ಯೋಗಿಯೂ ಹೌದು. ಅವರ ಮನಸ್ಸಿನಲ್ಲಿರುವ ಅಸಮಾಧಾನವನ್ನು ನಾವೆಲ್ಲರೂ ಒಟ್ಟಿಗೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ” ಎಂದು ಸಿಎಂ ಭರವಸೆ ನೀಡಿದ್ದಾರೆ.
ರಾಮಲಿಂಗಾರೆಡ್ಡಿ ಅವರ ಬೇಡಿಕೆಯ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟ ಸಿಎಂ, “ಅವರಿಗೆ ಜಲಸಂಪನ್ಮೂಲ ಖಾತೆಯಡಿ ಹಳ್ಳಿಗಳಲ್ಲಿ ಹೋಗಿ ಕೆಲಸ ಮಾಡಲು ಆಗಲ್ಲ ಎಂದು ಹೇಳಿದ್ದಾರೆ. ತಮಗೆ ಬೆಂಗಳೂರು ನಗರಾಭಿವೃದ್ಧಿಯಂತಹ ಬೇರೆ ಖಾತೆಯನ್ನು ನೀಡಬೇಕೆಂಬ ಬಲವಾದ ಆಪೇಕ್ಷೆ ಅವರಿಗಿದೆ. ಈ ವಿಷಯವಾಗಿ ನಾನು ಖುದ್ದಾಗಿ ಅವರ ಜೊತೆ ಚರ್ಚಿಸುತ್ತೇನೆ. ಮುಂದಿನ ಕ್ಯಾಬಿನೆಟ್ (ಸಚಿವ ಸಂಪುಟ) ಸಭೆಯಲ್ಲಿ ಈ ಖಾತೆ ಬದಲಾವಣೆಯ ವಿಷಯವನ್ನು ಚರ್ಚಿಸಿ, ಸೂಕ್ತ ತೀರ್ಮಾನವನ್ನು ಕೈಗೊಳ್ಳುತ್ತೇವೆ” ಎಂದು ಹೇಳುವ ಮೂಲಕ ಬಂಡಾಯ ಶಮನದ ಮುನ್ಸೂಚನೆ ನೀಡಿದ್ದಾರೆ.
ಆರಂಭದಲ್ಲೇ ಎದುರಾಗಿರುವ ಈ ಭಿನ್ನಮತವನ್ನು ಮುಖ್ಯಮಂತ್ರಿಗಳು ಹೇಗೆ ನಿಭಾಯಿಸಲಿದ್ದಾರೆ ಮತ್ತು ರಾಮಲಿಂಗಾರೆಡ್ಡಿ ಅವರು ಮುಖ್ಯಮಂತ್ರಿಗಳ ಮನವೊಲಿಕೆಗೆ ಮಣಿದು ತಮ್ಮ ರಾಜೀನಾಮೆಯನ್ನು ಹಿಂಪಡೆಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

Leave a Reply