ಸದಾ ಸದಭಿರುಚಿಯ ಚಿತ್ರಗಳ ಮೂಲಕ ಗಮನ ಸೆಳೆಯುವ ನಿರ್ದೇಶಕ ವೆಂಕಟ್ ಭಾರದ್ವಾಜ್, ಈ ಬಾರಿ ‘ರಕ್ಕಿ’ (Rakki) ಚಿತ್ರದ ಮೂಲಕ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಭೂಗತ ರೌಡಿಗಳ ಹಿನ್ನೆಲೆಯಲ್ಲಿ ಲವ್ ಸ್ಟೋರಿಗಳು ಬರುವುದು ಚಿತ್ರರಂಗದಲ್ಲಿ ಸಾಮಾನ್ಯ. ಆದರೆ, ಅಪರಾಧ ಹಿನ್ನೆಲೆಯ ಕಥೆಯೊಂದನ್ನು ರಕ್ತಪಾತವಿಲ್ಲದೆ, ಅತ್ಯಂತ ಸುಂದರವಾದ ಕೌಟುಂಬಿಕ ಕಥೆಯನ್ನಾಗಿಯೂ ಹೇಳಬಹುದು ಎಂಬುದನ್ನು ‘ರಕ್ಕಿ’ ಸಾಬೀತುಪಡಿಸಿದೆ.
ಕಥಾಹಂದರ: ರಕ್ಕಿ (ರಕ್ಕಿ ಸುರೇಶ್) ಅಂಡರ್ವರ್ಲ್ಡ್ ಆಪರೇಟರ್ ಡ್ಯಾನಿ (ಬಿ. ಸುರೇಶ) ಕೈಕೆಳಗೆ ಕೆಲಸ ಮಾಡುವ ಎತ್ತರದ, ಸುಂದರ ರೌಡಿ. ಡ್ಯಾನಿಯ ಮಗಳು ಸಿರಿ (ಪಲ್ಲವಿ) ಆತನನ್ನು ಹುಚ್ಚಾಗಿ ಪ್ರೀತಿಸುತ್ತಿರುತ್ತಾಳೆ. ಆರಂಭದಲ್ಲಿ ಆಕೆಯ ಪ್ರೀತಿಯನ್ನು ತಿರಸ್ಕರಿಸಿದರೂ ನಂತರ ಒಪ್ಪಿಕೊಳ್ಳುವ ರಕ್ಕಿ, ಸಿರಿಯ ಇಚ್ಛೆಯಂತೆ ತನ್ನ ಕೆಟ್ಟ ಕೆಲಸಗಳನ್ನು ಬಿಡಲು ಬಯಸುತ್ತಾನೆ. ಆದರೆ, ಶಾಸಕ ಸ್ಥಾನದ ಆಕಾಂಕ್ಷಿಯೊಬ್ಬನನ್ನು ಮುಗಿಸಲು ಡ್ಯಾನಿ ಒಪ್ಪಿಕೊಳ್ಳುವ ದೊಡ್ಡ ಡೀಲ್ನಿಂದ ಕಥೆ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತದೆ.
ಈ ಡೀಲ್ ಮುಗಿಸಲು ರಕ್ಕಿ ಮತ್ತು ಗಣೇಶ್ (ಸಂಪತ್) 130 ಕಿಲೋಮೀಟರ್ ಪ್ರಯಾಣ ಬೆಳೆಸುತ್ತಾರೆ. ಈ ಹಂತದಲ್ಲಿ ಬಹಿರಂಗವಾಗುವ ಕೆಲವು ಅಚ್ಚರಿಯ ಸತ್ಯಗಳು, ಚಾಂದಿನಿ (ಆಶಿಕಾ) ಹಾಗೂ ಓರ್ವ ರಾಜಕಾರಣಿಯ ಪ್ರವೇಶ, ಇದರ ಬೆನ್ನಲ್ಲೇ ಬರುವ ರಕ್ಕಿ ಮತ್ತು ಚಾಂದಿನಿಯ ಫ್ಲ್ಯಾಶ್ಬ್ಯಾಕ್ ಕಥೆಯು ಕ್ಲೈಮ್ಯಾಕ್ಸ್ಗೆ ಹೊಸ ಮೆರುಗು ನೀಡುತ್ತದೆ. ಈ ಡೀಲ್ ಏನಾಯಿತು? ಅವನ ಹಿಂದಿನ ಹಾಗೂ ಇಂದಿನ ಪ್ರೀತಿಗೆ ಸಿಕ್ಕ ಜಯವೇನು? ಎಂಬುದನ್ನು ಬೆಳ್ಳಿತೆರೆಯ ಮೇಲೆಯೇ ನೋಡಬೇಕು.
ಕಲಾವಿದರ ಅಭಿನಯ: ಕೇಂದ್ರ ಪಾತ್ರದಲ್ಲಿ ನಟಿಸಿರುವ ರಕ್ಕಿ ಸುರೇಶ್, ಭರವಸೆಯ ಸ್ಟಾರ್ ಯುವನಟರ ಸಾಲಿಗೆ ಸೇರುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾರೆ. ಆಕ್ಷನ್ ಹಾಗೂ ಡ್ಯಾನ್ಸ್ನಲ್ಲಿ ಅತ್ಯುತ್ತಮವಾಗಿರುವ ಇವರು ಚೊಚ್ಚಲ ಚಿತ್ರದಲ್ಲೇ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿಯಾಗಿರುವ ಇವರು, ದ್ವಿತೀಯಾರ್ಧದ ಫ್ಲ್ಯಾಶ್ಬ್ಯಾಕ್ ದೃಶ್ಯಗಳಲ್ಲಿ ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರನ್ನು ನೆನಪಿಸುತ್ತಾರೆ. ಆದರೆ, ಸಂಭಾಷಣೆ ಹೇಳುವಿಕೆಯಲ್ಲಿ ಅವರು ಇನ್ನಷ್ಟು ಪಳಗಬೇಕಿದೆ.
ನಾಯಕಿಯರಾದ ಪಲ್ಲವಿ ಮತ್ತು ಆಶಿಕಾ ಉತ್ತಮ ಅಭಿನಯದೊಂದಿಗೆ, ಆಕರ್ಷಕ ನೋಟದಿಂದ ಗಮನ ಸೆಳೆಯುತ್ತಾರೆ. ಹಿರಿಯ ನಟರಾದ ಬಿ. ಸುರೇಶ್, ಸಂಪತ್ ಮೈತ್ರೇಯ ಹಾಗೂ ಬಾಲ ರಾಜ್ವಾಡಿ ತಮ್ಮ ಪಾತ್ರಗಳಿಗೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. ತಾಯಿಯ ಪಾತ್ರದಲ್ಲಿ ಹರಿಣಿ ಶ್ರೀಕಾಂತ್ ಅವರ ನಟನೆ ಅದ್ಭುತವಾಗಿದ್ದು, ಕಥೆಗೆ ವಿಭಿನ್ನ ಆಯಾಮ ನೀಡಿದ್ದಾರೆ.
ತಾಂತ್ರಿಕ ವರ್ಗ: ಸಂಗೀತ ನಿರ್ದೇಶಕ ಲೋಕಿ ತವಸ್ಯ ಸಂಯೋಜನೆಯ “ವೈಬ್ ಆಗಿದೆ..” ಮತ್ತು “ನೀನು ನನಗಂತ ಬರೆದ ಭಗವಂತ” ಹಾಡುಗಳು ಗುನುಗುವಂತಿವೆ. ಇಂಟ್ರೋ, ರೌಡಿ ಹಾಗೂ ಫ್ಯಾಮಿಲಿ ಹಾಡುಗಳೂ ಕೇಳುಗರನ್ನು ಆಕರ್ಷಿಸುತ್ತವೆ. 122 ನಿಮಿಷಗಳ ಚಿತ್ರಕ್ಕೆ ಛಾಯಾಗ್ರಾಹಕ ಐಸಾಕ್ ಪ್ರಭಾಕರ್ ಸುಂದರ ದೃಶ್ಯಕಾವ್ಯ ಒದಗಿಸಿದ್ದಾರೆ. ಟೈಗರ್ ಶಿವು ಅವರ ಸಾಹಸ ದೃಶ್ಯಗಳು ನೈಜವಾಗಿ ಮೂಡಿಬಂದಿವೆ. ಸಂಭಾಷಣೆ ಇನ್ನಷ್ಟು ಹರಿತವಾಗಿರಬಹುದಿತ್ತು ಎನಿಸಿದರೂ, “ಸರಸ್ವತಿ ಅಂದ್ರೆ ಟ್ಯಾಲೆಂಟ್, ಲಕ್ಷ್ಮಿ ಅಂದ್ರೆ ಎಂಟರ್ಟೈನ್ಮೆಂಟ್…” ಎಂಬಂತಹ ಡೈಲಾಗ್ಗಳು ಶಿಳ್ಳೆ ಗಿಟ್ಟಿಸುತ್ತವೆ.
ತೀರ್ಪು: ಒಟ್ಟಾರೆಯಾಗಿ ಹೇಳುವುದಾದರೆ ‘ರಕ್ಕಿ’ ಕೇವಲ ಗೆಳೆಯರೊಂದಿಗೆ ಮಾತ್ರವಲ್ಲದೆ, ಪ್ರೇಯಸಿ ಹಾಗೂ ಇಡೀ ಕುಟುಂಬ ಸಮೇತ ಕುಳಿತು ನೋಡಬಹುದಾದ ಒಂದು ವಿಭಿನ್ನ ಮತ್ತು ಮನರಂಜನಾತ್ಮಕ ಸಿನಿಮಾ.

Leave a Reply