ಅಪರಿಚಿತರೊಂದಿಗೆ ಸೇರಿ ಬಾಳೆಗಿಡ ನಡೆಸಿದ ಉಗ್ರ ಪ್ರತಿಭಟನೆ!!! ಎಲ್ಲಿ ಅಂತ ನೋಡಿ ಈ ವರದಿ.. 

ಹಂಚಿಕೊಳ್ಳಿ

ಯಲ್ಲಾಪುರ: ರಸ್ತೆಯಲ್ಲಿ ಗುಂಡಿಗಳಿರುವುದು ಸಾಮಾನ್ಯ. ಆದರೆ ಇಡೀ ರಸ್ತೆಯೇ ಗುಂಡಿಯಾಗಿದ್ದರೆ? ಅದೂ ಅಂತಿಂಥ ರಸ್ತೆಯಲ್ಲ, ನಿತ್ಯ ಸಾವಿರಾರು ವಾಹನಗಳು, ಕೃಷಿಕರು, ರೋಗಿಗಳು ಸಂಚರಿಸುವ ಪ್ರಮುಖ ರಾಜ್ಯ ಹೆದ್ದಾರಿ!

ಹೌದು, ಕೈಗಾ – ಇಳಕಲ್ ರಾಜ್ಯ ಹೆದ್ದಾರಿಯ ಯಲ್ಲಾಪುರ ತಾಲೂಕು ವ್ಯಾಪ್ತಿಯ ರಸ್ತೆ ಈಗ ಸಂಪೂರ್ಣವಾಗಿ ನರಕ ಸದೃಶವಾಗಿದೆ. ವ್ಯವಸ್ಥೆಯ ತೀವ್ರ ಬೇಜವಾಬ್ದಾರಿತನಕ್ಕೆ ಬೇಸತ್ತ ನಾಗರಿಕರು, ಕಣ್ಣುಮುಚ್ಚಿ ಕುಳಿತಿರುವ ಲೋಕೋಪಯೋಗಿ ಇಲಾಖೆ (PWD) ಮತ್ತು ಜನಪ್ರತಿನಿಧಿಗಳಿಗೆ ಮರೆತುಹೋಗದ ಪಾಠ ಕಲಿಸಲು ವಜ್ರಳ್ಳಿ ಪಂಚಾಯತ ವ್ಯಾಪ್ತಿಯ ಶೆಳೆಮನೆ ಕ್ರಾಸ್  ಸಮೀಪದ ರಾಜ್ಯ ಹೆದ್ದಾರಿಯ ರಸ್ತೆಯ ಬೃಹತ್ ಹೊಂಡದ ನಡುವೆಯೇ ಬಾಳೆಗಿಡ ನೆಟ್ಟು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಈ ‘ಹಸಿರು ಚಾವಟಿ’ ಈಗ ಇಡೀ ಜಿಲ್ಲಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಆಡಳಿತ ಯಂತ್ರದ ವೈಫಲ್ಯವನ್ನು ಬೆತ್ತಲೆ ಮಾಡಿದೆ.

೪೦ ಕಿಲೋಮೀಟರ್ ವ್ಯಾಪ್ತಿ: 15 ಕಿ.ಮೀ ಮರಣದೂತ ಹೊಂಡಗಳು!

ಇಡಗುಂದಿ ಸಮೀಪದ ಚಿನ್ನಾಪುರ ಕ್ರಾಸ್‌ನಿಂದ ಮಾವಿನಮನೆ ಪಂಚಾಯತ್ ವ್ಯಾಪ್ತಿಯ ಬಾರೆ ಗ್ರಾಮದ ತನಕ ಸುಮಾರು 40 ಕಿಲೋಮೀಟರ್ ರಸ್ತೆ ಈ ವ್ಯಾಪ್ತಿಗೆ ಬರುತ್ತದೆ. ಅತ್ಯಂತ ಕಳಪೆ ನಿರ್ವಹಣೆಯಿಂದಾಗಿ ಇದರಲ್ಲಿ ಸುಮಾರು 15 ಕಿಲೋಮೀಟರ್ ರಸ್ತೆ ಅಲ್ಲಲ್ಲಿ ಹೊಂಡಗಳಿಂದ ಧ್ವಂಸಗೊಂಡಿದೆ. ದ್ವಿಚಕ್ರ ವಾಹನ ಸವಾರರಂತೂ ಬೆನ್ನುಮೂಳೆ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

‘ಅವೈಜ್ಞಾನಿಕ ಪ್ಯಾಚ್‌ವರ್ಕ್’ ಎಂಬ ಕಣ್ಣೊರೆಸುವ ತಂತ್ರ:

ರಸ್ತೆ ತೀರಾ ಹಾಳಾದಾಗಲೆಲ್ಲ ಸಾರ್ವಜನಿಕರು ಆಕ್ರೋಶ ಹೊರಹಾಕುವುದು, ಅದಕ್ಕೆ ತೇಪೆ ಹಚ್ಚುವ ಕೆಲಸ ಮಾಡುವುದು ಇಲಾಖೆಗೆ ರೂಢಿಯಾಗಿಬಿಟ್ಟಿದೆ. ಇಲ್ಲಿ ನಡೆದಿರುವ ಪ್ಯಾಚ್‌ವರ್ಕ್ ಕಾಮಗಾರಿಗಳು ಎಷ್ಟು ಅವೈಜ್ಞಾನಿಕವಾಗಿವೆ ಎಂದರೆ, ಡಾಂಬರು ಹಾಕಿದ ಕೆಲವೇ ದಿನಗಳಲ್ಲಿ ರಸ್ತೆ ಮತ್ತೆ ಕಿತ್ತುಹೋಗಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳ ಶಾಮೀಲಾತಿಯಿಂದಾಗಿ ಸಾರ್ವಜನಿಕರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂಬುದು ಸ್ಥಳೀಯರ ನೇರ ಆರೋಪವಾಗಿದೆ.

ತ್ರಿಕೋನ ಕಂಟಕ: ಮರಗಳು, ಕಿರಿದಾದ ರಸ್ತೆ ಮತ್ತು ‘ಹುಗಿಯುವ’ ಮಣ್ಣು!

ಈ ಹೆದ್ದಾರಿಯಲ್ಲಿ ಸಾಗುವುದೆಂದರೆ ಸಾವಿನೊಂದಿಗೆ ಸಂಚರಿಸಿದಂತೆ. ಇಲ್ಲಿ ವಾಹನ ಸವಾರರಿಗೆ ಮೂರು ರೀತಿಯ ಪ್ರಾಣಾಂತಿಕ ಸವಾಲುಗಳಿವೆ:

  1. ರಸ್ತೆಗೆ ಮುತ್ತಿಕ್ಕುವ ಗಿಡಗಂಟಿಗಳು: ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಕಾಡು ಗಿಡಗಳ ಟೊಂಗೆಗಳನ್ನು ವರ್ಷಗಳಿಂದ ಕತ್ತರಿಸಿಲ್ಲ. ಇವು ರಸ್ತೆಯ ಮೇಲೆಯೇ ವಾಲಿ ನಿಂತಿರುವುದರಿಂದ ಕೆಲವು ವಾಹನಗಳಿಗೆ ತಾಗುದಲ್ಲದೆ ತಿರುವುಗಳಲ್ಲಿ ಎದುರಿನಿಂದ ಬರುವ ವಾಹನಗಳು ಕಾಣಿಸದೆ ಅಪಘಾತಗಳು ಸಂಭವಿಸುತ್ತಿವೆ.
  2. ಅಪಾಯಕಾರಿ ಕಿರಿದಾದ ರಸ್ತೆ: ರಸ್ತೆಯ ಅಗಲ ತೀರಾ ಕಿರಿದಾಗಿದೆ. ಈ ರಸ್ತೆ ಯನ್ನು ಅಗಲಿಕರಣ ಮಾಡಬೇಕೆಂದು ಈಗಾಗಲೆ ಹಲವು ಭಾರಿ ಆಗ್ರಹ ಕೇಳಿಬಂದಿದೆ.  ಬಸ್ ಅಥವಾ ಲಾರಿಗಳಂತಹ ದೊಡ್ಡ ವಾಹನಗಳು ಎದುರಾದರೆ ಸಣ್ಣ ವಾಹನಗಳು ರಸ್ತೆಯಿಂದ ಕೆಳಗಿಳಿಯಲೇಬೇಕು.
  3. ಹುಗಿದು ಹಾಕುವ ಮಣ್ಣು: ರಸ್ತೆ ಬಿಟ್ಟು ವಾಹನ ಕೆಳಗಿಳಿಸಲು ಇಲಾಖೆಯು ಪಕ್ಕದಲ್ಲಿ ಹಾಕಿರುವ ಮಣ್ಣು ಗಟ್ಟಿಯಾಗಿಲ್ಲ. ಮಳೆಗೆ ಅದು ಕೆಸರಾಗಿದ್ದು, ವಾಹನ ಇಳಿಸಿದರೆ ಚಕ್ರಗಳು ಮಣ್ಣಿನಲ್ಲಿ ಹೂತುಹೋಗಿ ವಾಹನಗಳು ಉರುಳಿ ಬೀಳುತ್ತಿವೆ.

ಗರ್ಭಿಣಿಯರು, ರೋಗಿಗಳ ಪಾಲಿಗೆ ಹೆದ್ದಾರಿಯೇ ಶಾಪ:

ಈ ಭಾಗದ ಹಳ್ಳಿಗಳಿಂದ ತುರ್ತು ಚಿಕಿತ್ಸೆಗಾಗಿ ತಾಲೂಕು ಕೇಂದ್ರಕ್ಕೆ ಹೋಗಬೇಕಾದರೆ ಇದೇ ರಸ್ತೆಯನ್ನು ಆಶ್ರಯಿಸಬೇಕು. ಆದರೆ ರಸ್ತೆಯ ದುಸ್ಥಿತಿಯಿಂದಾಗಿ ಅಂಬುಲೆನ್ಸ್‌ಗಳೂ ಬರಲು ಹಿಂಜರಿಯುವಂತಾಗಿದೆ. ಗರ್ಭಿಣಿಯರನ್ನು ಹೆರಿಗೆಗೆ ಕರೆದೊಯ್ಯುವಾಗ ಅಥವಾ ತೀವ್ರ ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸೇರಿಸುವಾಗ ಈ ಹೊಂಡಗಳ ಮೇಲೆ ವಾಹನ ಚಲಾಯಿಸುವುದು ಜೀವಕ್ಕೇ ಕುತ್ತು ತರುತ್ತಿದೆ.

40 ಕಿ.ಮಿ. ಸಾಗಲು ಒಂದುವರೆ  ಗಂಟೆ ಬೇಕು??

ಇನ್ನು ಈ ಭಾಗ ಮಲೇನಾಡಿನ ಎತ್ತರ ತಗ್ಗು ಪ್ರದೇಶದ ಜಾಗವಾಗಿದ್ದು ಇಲ್ಲಿನ ರಸ್ತೆಗಳು ಭಾರಿ ತಿರುವು ಗಳಿಂದ ಕೂಡಿದೆ.  ಅಪಾಯಕಾರಿ ತಿರುವು ಹಾಗೂ ಅಪಾಯಕಾರಿ ಘಟ್ಟ ಪ್ರದೇಶ ಭಾಗದ ರಸ್ತೆ  ಇದಾಗಿದ್ದು ಇಲ್ಲಿ 40 ಕಿ.ಮೀ . ತಲುಪಲು ಸುಮಾರು ಒಂದುವರೆ ಗಂಟೆಗಳೆ ಬೇಕಾಗಬಹುದು. ಇನ್ನು ಆಸ್ಪತ್ರೆ ಅಥವಾ ತುರ್ತು ಸಮಯದಲ್ಲಿ ಪ್ರಯಾಣಿಕರು ತೀರಾ ಸಮಸ್ಯೆ ಅನುಭವಿಸುತ್ತಿದ್ದಾರೆ. ಕೆಲವೊಂದು ಕಡೆಯಲ್ಲಿ ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಯಂತೆ ಇದ್ದರೆ ಇಲ್ಲಿನ ರಾಜ್ಯ ಹೆದ್ದಾರಿ ಮನೆಮನೆಗೆ ಹೋಗುವ ರಸ್ತೆಯಂತಿದೆ.

ಸಾರ್ವಜನಿಕರ ಆಕ್ರೋಶ ಮತ್ತು ಎಚ್ಚರಿಕೆ:

“ನಾವು ವೋಟು ಹಾಕಲು ಮಾತ್ರ ಸೀಮಿತವೇ? ಚುನಾವಣೆ ಬಂದಾಗ ಕೈಮುಗಿದು ಬರುವ ಜನಪ್ರತಿನಿಧಿಗಳಿಗೆ ನಮ್ಮ ಈ ನರಕಯಾತನೆ ಕಾಣಿಸುವುದಿಲ್ಲವೇ? ಇವತ್ತು ಅಪರಿಚಿತರು ರಸ್ತೆಯಲ್ಲಿ ಬಾಳೆಗಿಡ ನೆಟ್ಟಿರುವುದು ಇಡೀ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿ. ಇನ್ನಾದರೂ ರಸ್ತೆ ಸರಿಪಡಿಸದಿದ್ದರೆ, ಮುಂದಿನ ದಿನಗಳಲ್ಲಿ ನಾವೇ ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸುತ್ತೇವೆ” ಎಂದು ಸುತ್ತಮುತ್ತಲಿನ ಭಾಗದ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ‘ಬಾಳೆಗಿಡದ ಪ್ರತಿಭಟನೆ’ಯ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಲೋಕೋಪಯೋಗಿ ಇಲಾಖೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಸಚಿವರು ಈ ತಾರತಮ್ಯವನ್ನು ನಿಲ್ಲಿಸಿ, ತಕ್ಷಣವೇ ರಸ್ತೆಯ ಸಂಪೂರ್ಣ ಮರು ಡಾಂಬರೀಕರಣಕ್ಕೆ ಅನುದಾನ ಬಿಡುಗಡೆ ಮಾಡಬೇಕಿದೆ.

Leave a Reply

Your email address will not be published. Required fields are marked *