ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಾ ಎಡವಟ್ಟು: 19 ಸಾವಿರ ಫಲಾನುಭವಿಗಳಿಗೆ ಒಂದೇ ಬ್ಯಾಂಕ್ ಖಾತೆ!

ಹಂಚಿಕೊಳ್ಳಿ

ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಯಾದ ‘ಗೃಹಲಕ್ಷ್ಮಿ’ ಅನುಷ್ಠಾನದಲ್ಲಿ ಗಂಭೀರ ಲೋಪದೋಷಗಳು ಕಂಡುಬಂದಿದ್ದು, ಮಹಾಲೇಖಪಾಲರ (CAG) ತನಿಖೆಯಿಂದ ಕೋಟ್ಯಂತರ ರೂಪಾಯಿ ಪಾವತಿಯಲ್ಲಿನ ಭಾರಿ ವ್ಯತ್ಯಾಸಗಳು ಬೆಳಕಿಗೆ ಬಂದಿವೆ. ಸಿಎಜಿ ಡೇಟಾ ಅನಾಲಿಟಿಕ್ಸ್ ವಿಭಾಗವು ನಡೆಸಿದ ತೀವ್ರ ದತ್ತಾಂಶ ಪರಿಶೀಲನೆಯಲ್ಲಿ ಆಘಾತಕಾರಿ ನಿಯಮ ಉಲ್ಲಂಘನೆಗಳು ಪತ್ತೆಯಾಗಿದ್ದು, ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಲಿಖಿತ ಉತ್ತರವನ್ನು ಕೋರಲಾಗಿದೆ.

ಸಿಎಜಿ ವರದಿಯ ಪ್ರಕಾರ, ಒಟ್ಟು 19,020 ಫಲಾನುಭವಿಗಳು ಜಂಟಿಯಾಗಿ ಅಥವಾ ಒಟ್ಟಿಗೆ ಒಂದೇ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿರುವುದು ಪತ್ತೆಯಾಗಿದೆ. ಬೇರೆಯವರ ಖಾತೆ ಸಂಖ್ಯೆಯನ್ನು ಇಲಾಖೆ ಹೇಗೆ ಬಳಸಿಕೊಂಡಿತು ಮತ್ತು ಈ ಹಣ ಯಾರಿಗೆ ತಲುಪುತ್ತಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಇದರ ಜೊತೆಗೆ, ಕನಿಷ್ಠ ಬ್ಯಾಂಕ್ ಖಾತೆ ಸಂಖ್ಯೆಗಳ ದಾಖಲಾತಿಯೇ ಇಲ್ಲದೆ ಒಟ್ಟು 23,262 ಖಾತೆಗಳಿಗೆ ನಿಯಮಬಾಹಿರವಾಗಿ ಸುಮಾರು 46.52 ಕೋಟಿ ರೂಪಾಯಿಗಳನ್ನು ಪಾವತಿ ಮಾಡಿರುವುದು ಬೆಳಕಿಗೆ ಬಂದಿದೆ.

ಯೋಜನೆಯಡಿ ಫಲಾನುಭವಿಗಳು ಪದೇಪದೇ ಬ್ಯಾಂಕ್ ಖಾತೆಗಳನ್ನು ಬದಲಾಯಿಸುತ್ತಿದ್ದು, ಇಂತಹ 10,06,308 ದಾಖಲೆಗಳು ಸಿಎಜಿ ಪರಿಶೀಲನೆಯಲ್ಲಿ ಪತ್ತೆಯಾಗಿವೆ. ಕೆಲವು ನಿರ್ದಿಷ್ಟ ತಿಂಗಳುಗಳಲ್ಲಿ ಸುಮಾರು 1.80 ಕೋಟಿ ರೂ. ಮೊತ್ತವನ್ನು 8,995 ಖಾತೆಗಳಿಗೆ ಪುನಃ ಪಾವತಿ ಮಾಡಲಾಗಿದೆ. ಇಷ್ಟೆಲ್ಲಾ ಲೋಪಗಳು ನಡೆದಿದ್ದರೂ, ಎಲೆಕ್ಟ್ರಾನಿಕ್ ಡೇಟಾ ಕಂಪ್ಯೂಟರ್ ಸಿಸ್ಟಮ್ಸ್ (ಇಡಿಸಿಎಸ್) ನಿಂದ ಫಲಾನುಭವಿಗಳ ಪಟ್ಟಿ, ರದ್ದುಪಡಿಸಲಾದ ಅರ್ಹರ ವಿವರಗಳು ಮತ್ತು ಕಾರಣಗಳನ್ನು ಸಿಎಜಿಗೆ ನೀಡಲು ಇಲಾಖೆ ವಿಫಲವಾಗಿದೆ. ಎಜಿ ಕಚೇರಿಯ ಪದೇಪದೇ ಜ್ಞಾಪನಾ ಪತ್ರಗಳಿಗೂ ಅಧಿಕಾರಿಗಳು ಕ್ಯಾರೆ ಎಂದಿಲ್ಲ.

ಇಲಾಖೆಯ ಈ ಕಳ್ಳಾಟವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ತಕ್ಷಣವೇ ಮಹಾಲೇಖಪಾಲರಿಗೆ ಸಂಪೂರ್ಣ ಮಾಹಿತಿ ಒದಗಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಖಡಕ್ ಸೂಚನೆ ನೀಡಿದ್ದಾರೆ. ಆದರೆ ಸರ್ಕಾರದ ಮುಖ್ಯಸ್ಥರ ಆದೇಶಕ್ಕೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದೇ ವೇಳೆ ಕಳೆದ ಎರಡು ವರ್ಷಗಳಲ್ಲಿ ಒಟ್ಟು 3 ಕಂತುಗಳು (2024-25ರಲ್ಲಿ 2 ಕಂತು, 2025-26ರಲ್ಲಿ 1 ಕಂತು) ಬಾಕಿ ಉಳಿದಿದ್ದು, “5,000 ಕೋಟಿ ರೂ. ಎಲ್ಲಿ ಹೋಯಿತು?” ಎಂದು ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

Leave a Reply

Your email address will not be published. Required fields are marked *

Advertisement


This will close in 3 seconds