
ಯಲ್ಲಾಪುರ: ಪಟ್ಟಣದ ಹೆಬ್ಬಾರ ನಗರದಲ್ಲಿ ನಿರ್ಮಿಸಲಾಗಿರುವ ಜಿ+2 ಮಾದರಿಯ ಮನೆಗಳ ಹಂಚಿಕೆಯಲ್ಲಿ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ತಹಶೀಲ್ದಾರ್ ಕಚೇರಿ ಎದುರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೇಶವ ಚೌಗಲೆ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಜಿ+2 ಮನೆ ಹಂಚಿಕೆಯಲ್ಲಿ ಉಂಟಾಗಿರುವ ಅಕ್ರಮ ಹಾಗೂ ಅನ್ಯಾಯದ ವಿರುದ್ಧ ಬಿಜೆಪಿ ವತಿಯಿಂದ ಈಗಾಗಲೇ ನಾಲ್ಕು ಬಾರಿ ಪ್ರತಿಭಟನೆ ನಡೆಸಲಾಗಿದೆ. ಆದರೂ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಬಡ ಹಾಗೂ ನಿಜವಾದ ಅರ್ಹ ಫಲಾನುಭವಿಗಳಿಗೆ ಮನೆಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಗಣೇಶ ಪಾಟಣಕರ್ ಮಾತನಾಡಿ, ಬಡವರಿಗಾಗಿ ನಿರ್ಮಿಸಿರುವ ಕೊಳಚೆ ಮಂಡಳಿ ಮನೆಗಳು ಶ್ರೀಮಂತರ ಪಾಲಾಗಿರುವುದು ಖಂಡನೀಯ. ಸುಳ್ಳು ಮಾಹಿತಿ ನೀಡಿ ಮನೆ ಪಡೆದಿರುವುದು ದೃಢಪಟ್ಟರೆ ಅಂತಹ ಮನೆಗಳನ್ನು ವಾಪಸ್ ಪಡೆದು, ನಿಜವಾದ ಅರ್ಹರಿಗೆ ಹಂಚಿಕೆ ಮಾಡಬೇಕು. ಮನೆ ಹಂಚಿಕೆ ಪ್ರಕ್ರಿಯೆಯಲ್ಲಿನ ಅವ್ಯವಹಾರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ಮಾತನಾಡಿ, ಬಡವರ ಅಹವಾಲುಗಳಿಗೆ ಸ್ಪಂದಿಸುವ ಬದಲು ಕೇವಲ ಭರವಸೆ ನೀಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ನಿಜವಾದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮನೆಗಳನ್ನು ಹಂಚಿಕೆ ಮಾಡಬೇಕು. ಗಾರ್ಮೆಂಟ್ ಅಂಗಡಿ ಮಾಲೀಕರು ಸೇರಿದಂತೆ ಆರ್ಥಿಕವಾಗಿ ಸಬಲರಾಗಿರುವವರಿಗೆ ಮನೆ ನೀಡಲಾಗಿದೆ ಎಂಬ ಆರೋಪಗಳ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ಜಿ.ಪಂ. ಮಾಜಿ ಸದಸ್ಯರಾದ ಉಮೇಶ ಭಾಗ್ವತ್, ರಾಘವೇಂದ್ರ ಭಟ್ಟ, ಬಿಜೆಪಿ ಪ್ರಮುಖರಾದ ನಟರಾಜ ಗೌಡರ್, ಪ್ರದೀಪ ಯಲ್ಲಾಪುರಕರ್ ಸೇರಿದಂತೆ ಹಲವು ಕಾರ್ಯಕರ್ತರು ಹಾಗೂ ಮನೆಗಾಗಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.















Leave a Reply