Dharmasthala | ಚಿನ್ನಯ್ಯನ ಜೊತೆ ನಾನು ಮಾತನಾಡಿದ್ದು ನಿಜ: ಪ್ರಕಾಶ್ ರಾಜ್‌

ಹಂಚಿಕೊಳ್ಳಿ

ಬೆಂಗಳೂರು: ಬಹುಚರ್ಚಿತ ಧರ್ಮಸ್ಥಳ ಪ್ರಕರಣದಲ್ಲಿ (Dharmasthala Case) ತಮ್ಮ ಹೆಸರು ತಳುಕು ಹಾಕಿಕೊಂಡಿರುವ ವಿಚಾರವಾಗಿ ಹಿರಿಯ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್‌ (Prakash Raj) ಅವರು ಇಂದು ರಾಜಧಾನಿಯಲ್ಲಿ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಪ್ರಕರಣದ ಮುಖ್ಯ ಪಾತ್ರಧಾರಿ ಚಿನ್ನಯ್ಯ ತಮಗೆ ಫೋನ್ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.

ಈಗಾಗಲೇ ನ್ಯಾಯಾಲಯದಲ್ಲಿ ಚಿನ್ನಯ್ಯ ಹೇಳಿಕೆ ನೀಡಿದ್ದಾನೆ. ಗಿರೀಶ್ ಮಟ್ಟಣ್ಣನವರ್‌ ಹೇಳಿದ ರೀತಿಯಲ್ಲಿ ಕೇಳಿದರೆ ನಾನು ನಿನ್ನನ್ನು ಅಪ್ಪಿಕೊಳ್ಳುತ್ತೇನೆ ಎಂದು ಪ್ರಕಾಶ್ ರಾಜ್ ಹೇಳಿದ್ದರು ಅಂತಾ ಆತ ತಿಳಿಸಿದ್ದಾನೆ. ಜೊತೆಗೆ ಕೇರಳದಿಂದ ಹಣ ಬಂದಿದೆ ಎಂದು ಹೇಳಿ ನನ್ನ ಹೆಸರನ್ನು ಉಲ್ಲೇಖ ಮಾಡಿದ್ದಾನೆ. ಆದರೆ ನಾನು ಯಾವತ್ತೂ ಧರ್ಮಸ್ಥಳಕ್ಕೆ ಹೋಗಿಲ್ಲ ಮತ್ತು ಗಿರೀಶ್ ಮಟ್ಟನವರ್‌ ಅವರನ್ನು ಎಂದೂ ಭೇಟಿಯಾಗಿಲ್ಲ” ಎಂದು ಪ್ರಕಾಶ್ ರಾಜ್ ಸ್ಪಷ್ಟಪಡಿಸಿದರು.

ಹಳೆಯ ಘಟನೆಯನ್ನು ನೆನಪಿಸಿಕೊಂಡ ನಟ, “ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹಾಕಿದ್ದಾರೆ ಎಂಬ ಮಾತುಗಳು ಕೇಳಿಬಂದಾಗ, ನಾನು ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಈ ಬಗ್ಗೆ ಎಸ್‌ಐಟಿ (SIT) ರಚನೆ ಮಾಡುವಂತೆ ಒತ್ತಾಯಿಸಿದ್ದೆ. ಅದೇ ಸಮಯದಲ್ಲಿ ವ್ಯಕ್ತಿಯೊಬ್ಬ ನನಗೆ ಕರೆ ಮಾಡಿ, ‘ಮಾಸ್ಕ್ ಮ್ಯಾನ್ ಚಿನ್ನಯ್ಯ’ ಮಾತನಾಡಬೇಕು ಎಂದಿದ್ದ. ಆ ಚಿನ್ನಯ್ಯ ಎಂಬಾತ ಮಂಡ್ಯದವನು ಎಂದು ನನಗೆ ಗೊತ್ತು, ಆದರೆ ಆತ ನನ್ನೊಂದಿಗೆ ತಮಿಳಿನಲ್ಲಿ ಮಾತನಾಡಿದ್ದ. ಆತ ನನಗೆ ಕರೆ ಮಾಡಿ ನಿನ್ನನ್ನು ಭೇಟಿಯಾಗಬೇಕು ಅಂದಾಗ, ನಾನು ಯಾಕೆ ನಿನ್ನನ್ನು ಭೇಟಿಯಾಗಲಿ? ನೀನು ಏನು ಹೇಳಬೇಕು ಎಂದುಕೊಂಡಿದ್ದೀಯೋ ಅದನ್ನು ರೆಕಾರ್ಡ್ ಮಾಡಿ ಕಳುಹಿಸು ಎಂದು ಹೇಳಿದ್ದೆ. ಅಲ್ಲದೆ ಈ ವಿಷಯವನ್ನು ನಾನು ತಕ್ಷಣವೇ ಪ್ರಣವ್‌ ಮೊಹಂತಿ ಸರ್‌ ಅವರಿಗೆ ಕರೆ ಮಾಡಿ ತಿಳಿಸಿದ್ದೆ ಮತ್ತು ಅವರನ್ನೇ ಭೇಟಿ ಮಾಡುವಂತೆ ಚಿನ್ನಯ್ಯನಿಗೂ ಹೇಳಿದ್ದೆ” ಎಂದು ವಿವರಿಸಿದರು.

ಚಿನ್ನಯ್ಯ ಎಂಬ ವ್ಯಕ್ತಿ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿದ್ದಾನೆ (ವಂಚಿಸಿದ್ದಾನೆ) ಎಂಬುದು ಈಗ ಪೊಲೀಸ್ ತನಿಖೆಯಿಂದಲೇ ಸಾಬೀತಾಗಿದೆ. ಆದರೆ ನಾನು ಸಮಾಜದಲ್ಲಿ ಏನೇ ಪ್ರಶ್ನೆ ಕೇಳಿದರೂ ತಕ್ಷಣ ನನ್ನನ್ನು ‘ಹಿಂದೂ ವಿರೋಧಿ’ ಎಂದು ಬಿಂಬಿಸುತ್ತಾರೆ. ಈ ಇಡೀ ವಿಚಾರ ಸದ್ಯ ಕೋರ್ಟ್‌ ಅಂಗಳದಲ್ಲಿದೆ. ನಾನು ಧರ್ಮಸ್ಥಳಕ್ಕೆ ಹೋಗಿಯೇ ಇಲ್ಲ ಎಂದಮೇಲೆ, ನಾನೇಕೆ ಅಲ್ಲಿನ ಪವಿತ್ರ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲಿ?” ಎಂದು ಪ್ರಕಾಶ್ ರಾಜ್ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.

Leave a Reply

Your email address will not be published. Required fields are marked *

Advertisement


This will close in 3 seconds