ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರಿಗೆ ಮತ್ತೊಂದು ಆಘಾತ ಎದುರಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ತರಕಾರಿ ಬೆಲೆ ಏರಿಕೆಯ ನಡುವೆಯೇ ಇದೀಗ ಅಕ್ಕಿಯ ದರದಲ್ಲೂ ಭಾರಿ ಏರಿಕೆ ದಾಖಲಾಗಿದ್ದು, ಮಧ್ಯಮ ಮತ್ತು ಬಡ ವರ್ಗದ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ.
ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ವಿವಿಧ ತಳಿಯ ಅಕ್ಕಿಗಳ ಬೆಲೆ ಕಳೆದ ಕೆಲವು ವಾರಗಳಲ್ಲಿ ಗಮನಾರ್ಹವಾಗಿ ಏರಿಕೆಯಾಗಿದೆ. ಕೆಲ ತಳಿಗಳಲ್ಲಿ ಪ್ರತಿ ಕೆಜಿಗೆ ₹10 ರಿಂದ ₹20ರವರೆಗೆ ಹೆಚ್ಚಳ ಕಂಡುಬಂದಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ನಿತ್ಯದ ಆಹಾರದ ಅವಿಭಾಜ್ಯ ಅಂಗವಾಗಿರುವ ಅಕ್ಕಿಯ ಬೆಲೆ ಏರಿಕೆಯಿಂದ ಕುಟುಂಬಗಳ ಖರ್ಚು ಮತ್ತಷ್ಟು ಹೆಚ್ಚಾಗಿದೆ.

ಮಾರುಕಟ್ಟೆ ವರ್ತಕರ ಪ್ರಕಾರ, ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿಗೆ ಬೇಡಿಕೆ ಹೆಚ್ಚುತ್ತಿರುವುದರ ನಡುವೆಯೇ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಅಕ್ಕಿ ರಫ್ತಿಗೆ ಹೆಚ್ಚಿನ ಅವಕಾಶ ನೀಡಿರುವ ಪರಿಣಾಮ ಉತ್ತಮ ಗುಣಮಟ್ಟದ ಅಕ್ಕಿಯ ಲಭ್ಯತೆ ದೇಶೀಯ ಮಾರುಕಟ್ಟೆಯಲ್ಲಿ ಕಡಿಮೆಯಾಗಿದೆ. ಇದರಿಂದ ಮುಕ್ತ ಮಾರುಕಟ್ಟೆಯಲ್ಲಿ ದರಗಳು ಏರಿಕೆಯಾಗುತ್ತಿವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಅಕ್ಕಿ ಬೆಲೆ ಏರಿಕೆಯ ಪರಿಣಾಮ ಗ್ರಾಹಕರು ಖರೀದಿಯ ಪ್ರಮಾಣವನ್ನು ಕಡಿಮೆ ಮಾಡುತ್ತಿರುವುದು ಕಂಡುಬಂದಿದೆ. ಇದರಿಂದ ವ್ಯಾಪಾರಿಗಳ ಮಾರಾಟದಲ್ಲೂ ಕುಸಿತ ಉಂಟಾಗಿದ್ದು, ಮಾರುಕಟ್ಟೆಯಲ್ಲಿ ವಹಿವಾಟಿನ ಮೇಲೂ ಪರಿಣಾಮ ಬೀರಿದೆ ಎಂದು ವರ್ತಕರು ಅಭಿಪ್ರಾಯಪಟ್ಟಿದ್ದಾರೆ.
ಹೊಸ ಭತ್ತದ ಬೆಳೆ ಮಾರುಕಟ್ಟೆಗೆ ಬರಲು ಇನ್ನೂ ಕೆಲವು ತಿಂಗಳುಗಳ ಕಾಲ ಕಾಯಬೇಕಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಬೆಲೆ ಇಳಿಕೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ರೈತರು ಬೆಳೆದಿರುವ ಹೊಸ ಭತ್ತ ಕಟಾವಾಗಿ ಅಕ್ಕಿ ರೂಪದಲ್ಲಿ ಮಾರುಕಟ್ಟೆಗೆ ಬರಲು ಕನಿಷ್ಠ ನವೆಂಬರ್ ತಿಂಗಳವರೆಗೆ ಸಮಯ ಬೇಕಾಗುತ್ತದೆ. ಅಲ್ಲಿಯವರೆಗೆ ಪೂರೈಕೆ ಕೊರತೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಸ್ಟೀಮ್ ರೈಸ್ ದರ ಕೆಜಿಗೆ ₹47ರಿಂದ ₹56ಕ್ಕೆ ಏರಿಕೆಯಾಗಿದೆ. ರಾ ರೈಸ್ ₹50ರಿಂದ ₹62ಕ್ಕೆ, ಕೋಲಂ ರೈಸ್ ₹68ರಿಂದ ₹80ಕ್ಕೆ ಹಾಗೂ ಕೋಲಂ ಸ್ಟೀಮ್ ₹55ರಿಂದ ₹65ಕ್ಕೆ ಏರಿಕೆಯಾಗಿದೆ. ವಿವಿಧ ತಳಿಗಳಲ್ಲಿ ₹9ರಿಂದ ₹12ರವರೆಗೆ ಹೆಚ್ಚಳ ದಾಖಲಾಗಿರುವುದು ಗ್ರಾಹಕರ ಕಳವಳಕ್ಕೆ ಕಾರಣವಾಗಿದೆ.
ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರ ಇದೇ ರೀತಿ ಮುಂದುವರಿದರೆ, ಮುಂಬರುವ ತಿಂಗಳುಗಳಲ್ಲಿ ಕೆಲವು ಪ್ರೀಮಿಯಂ ತಳಿಯ ಅಕ್ಕಿಗಳ ದರ ಕೆಜಿಗೆ ₹100ರ ಗಡಿ ತಲುಪುವ ಸಾಧ್ಯತೆಯನ್ನೂ ಮಾರುಕಟ್ಟೆ ತಜ್ಞರು ತಳ್ಳಿಹಾಕಿಲ್ಲ.
ಒಟ್ಟಾರೆಯಾಗಿ ಇಂಧನ, ಗ್ಯಾಸ್, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಅನ್ನದ ಬಟ್ಟಲಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ದುಬಾರಿ ಜೀವನದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಹೆಚ್ಚುತ್ತಿದೆ.


Leave a Reply