ಮೈಸೂರು: ರಸ್ತೆಯಲ್ಲಿ ವಾಹನವೊಂದು ಮತ್ತೊಂದು ವಾಹನಕ್ಕೆ ತಾಗಿದ ಸಣ್ಣ ವಿಚಾರವೊಂದು ದೊಡ್ಡ ಮಟ್ಟದ ರಕ್ತಪಾತಕ್ಕೆ ಕಾರಣವಾಗಿರುವ ಆಘಾತಕಾರಿ ಘಟನೆ ಮೈಸೂರು ತಾಲೂಕಿನ ಗುಂಗ್ರಾಲ್ ಛತ್ರ ಗ್ರಾಮದಲ್ಲಿ ನಡೆದಿದೆ. ಕ್ಯಾಂಟರ್ ವಾಹನವೊಂದಕ್ಕೆ ಆಟೋ ತಾಗಿದ (ಟಚ್ ಆದ) ವಿಚಾರಕ್ಕೆ ಸಂಬಂಧಿಸಿದಂತೆ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ, ಜಗಳ ಬಿಡಿಸಲು ಬಂದ ಸ್ಥಳೀಯರ ಮೇಲೆಯೇ ಆಟೋದಲ್ಲಿದ್ದ ಪುಂಡರು ಏಕಾಏಕಿ ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಮದ್ಯದ ಅಮಲಿನಲ್ಲಿ ಏಕಾಏಕಿ ಚಾಕು ದಾಳಿ
ಮೈಸೂರಿನ ಇಟ್ಟಿಗೆಗೂಡು ನಿವಾಸಿಗಳಾದ ಜಿತೇಂದ್ರ, ಗುರುರಾಜ್, ಗುರುಪ್ರಸಾದ್ ಹಾಗೂ ರಾಹುಲ್ ಎಂಬುವವರೇ ಹಲ್ಲೆ ನಡೆಸಿದ ಆರೋಪಿಗಳು. ಮದ್ಯಪಾನ ಮಾಡಿ ಆಟೋದಲ್ಲಿ ಬಂದಿದ್ದ ಈ ಯುವಕರು ಕ್ಯಾಂಟರ್‌ಗೆ ಡಿಕ್ಕಿ ಹೊಡೆದ ಬಳಿಕ ಕ್ಯಾಂಟರ್ ಚಾಲಕನೊಂದಿಗೆ ರಂಪಾಟ ಶುರು ಮಾಡಿದ್ದಾರೆ. ಈ ವೇಳೆ ಗಲಾಟೆ ಬಿಡಿಸಲು ಹಾಗೂ ಪರಿಸ್ಥಿತಿ ತಿಳಿಗೊಳಿಸಲು ಮುಂದಾದ ಗ್ರಾಮದ ಯುವಕರ ಮೇಲೆಯೇ ಈ ದುಷ್ಕರ್ಮಿಗಳು ಸಿಕ್ಕ ಸಿಕ್ಕ ಕಡೆ ಚಾ*ಕುವಿನಿಂದ ದಾಳಿ ಮಾಡಿದ್ದಾರೆ.
ಈ ಭೀಕರ ಹಲ್ಲೆಯಲ್ಲಿ ಗ್ರಾಮದ ಐವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪುಂಡರು ಚಾಕುವಿನಿಂದ ಹಲ್ಲೆ ನಡೆಸುತ್ತಿರುವ ಭೀಕರ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ.
ಪುಂಡರಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ಚಾ*ಕು ದಾಳಿ ನಡೆಸಿ, ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ ಈ ಆರೋಪಿಗಳನ್ನು ಸ್ಥಳೀಯ ಗ್ರಾಮಸ್ಥರು ಬೆನ್ನಟ್ಟಿ ಹಿಡಿದಿದ್ದಾರೆ. ಅಮಾಯಕರ ಮೇಲೆ ಚಾ*ಕು ಇರಿದು ಆತಂಕ ಸೃಷ್ಟಿಸಿದ ಪುಂಡರಿಗೆ ಗ್ರಾಮಸ್ಥರು ಬಿಡದೆ ಧರ್ಮದೇಟು (ಗೂಸಾ) ನೀಡಿದ್ದು, ಬಳಿಕ ಪೊಲೀಸರನ್ನು ಕರೆಯಿಸಿ ಅವರಿಗೆ ಒಪ್ಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ ಹಾಗೂ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply