ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಾರುತಗಳು ದುರ್ಬಲಗೊಂಡ ಹಿನ್ನೆಲೆಯಲ್ಲಿ ಅನ್ನದಾತರಲ್ಲಿ ತೀವ್ರ ಆತಂಕ ಮೂಡಿದೆ. ಮಳೆಗಾಲ ಆರಂಭವಾಗಿ ಹದಿನೈದು ದಿನಗಳೇ ಕಳೆದರೂ ವರುಣದೇವ ಕೃಪೆ ತೋರದ ಕಾರಣ, ಮಳೆಗಾಗಿ ಹಳ್ಳಿಗಳಲ್ಲಿ ಕತ್ತೆ ಹಾಗೂ ಗೊಂಬೆಗಳ ಮದುವೆ ಮಾಡುವ ಮೂಲಕ ವರುಣನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.
ಮಳೆಗಾಗಿ ವಿಲಕ್ಷಣ ಆಚರಣೆಗಳು
ಮಳೆ ಬಾರದೆ ಕಂಗಾಲಾಗಿರುವ ಹೂವಿನಹಡಗಲಿಯ ಇಟ್ಟಿಗಿ ಗ್ರಾಮಸ್ಥರು ಸಾಂಪ್ರದಾಯಿಕ ಶೈಲಿಯಲ್ಲಿ ಕತ್ತೆಗಳ ಮದುವೆ ಮಾಡಿಸಿದ್ದಾರೆ. ಇತ್ತ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದಲ್ಲೂ ಗ್ರಾಮ ದೇವತೆ ಯುವಕ ಸಂಘ ಹಾಗೂ ಹಿರಿಯರೆಲ್ಲ ಸೇರಿ ಹಬ್ಬದ ವಾತಾವರಣದಲ್ಲಿ ಗೊಂಬೆಗಳ ಮದುವೆ ನೆರವೇರಿಸಿ, ದೇವಿಗೆ ಉಡಿ ತುಂಬಿ ಮಳೆಗಾಗಿ ಬೇಡಿಕೊಂಡಿದ್ದಾರೆ.
ಹಾವೇರಿಯಲ್ಲಿ ಬೆಳೆ ನಾಶ ಮಾಡಿದ ಅನ್ನದಾತ
ಈ ಬಾರಿ ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಮಳೆಯಾಶ್ರಿತ ಪ್ರದೇಶಗಳ ರೈತರು ಉತ್ಸಾಹದಿಂದ ಬಿತ್ತನೆ ಮಾಡಿದ್ದರು. ಆದರೆ ಬಿತ್ತನೆ ಮುಗಿದು 15 ದಿನಗಳಾದರೂ ಮಳೆಯ ಸುಳಿವೇ ಇಲ್ಲದಂತಾಗಿದೆ. ಇದರಿಂದ ಕಂಗಾಲಾದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ರೈತರು, ನೀರಿನ ಕೊರತೆಯಿಂದ ಒಣಗುತ್ತಿದ್ದ ಬೆಳೆಯನ್ನು ತಾವೇ ಸ್ವತಃ ನಾಶಪಡಿಸಿ ಆಕ್ರೋಶ ಹೊರಹಾಕಿದ್ದಾರೆ.
ಮುಂದಿನ 7 ದಿನ ಹಗುರ ಮಳೆ ಮುನ್ಸೂಚನೆ
ಮುಂಗಾರು ದುರ್ಬಲವಾಗಿದ್ದರೂ ರಾಜ್ಯದ ಹಲವೆಡೆ ಮುಂದಿನ ಏಳು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
-
ಕರಾವಳಿ ಜಿಲ್ಲೆಗಳು: ಜೂನ್ 22 ರಿಂದ ಜೂನ್ 24 ರವರೆಗೆ ಗುಡುಗು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ.
-
ಒಳನಾಡು ಜಿಲ್ಲೆಗಳು: ಜೂನ್ 22, 23 ಮತ್ತು ಜೂನ್ 25 ರಂದು ಜೋರಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗಬಹುದು ಎಂದು ಎಚ್ಚರಿಸಲಾಗಿದೆ.

Leave a Reply