ರೈತರ ಜಮೀನಿನಲ್ಲಿದ್ದ ಬೋರ್ವೆಲ್ ಹಾಗೂ ಪಂಪ್ಸೆಟ್ ಕೇಬಲ್ಗಳನ್ನು ಕದಿಯುತ್ತಿದ್ದ ಮೂವರು ಕಳ್ಳರನ್ನು ಗ್ರಾಮಸ್ಥರೇ ರೆಡ್ ಹ್ಯಾಂಡ್ ಆಗಿ ಹಿಡಿದು, ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ತಂಗಳಗೆರೆ, ಉಪ್ಪರಕನಹಳ್ಳಿ ಮತ್ತು ದ್ಯಾಪಸಂದ್ರ ಗ್ರಾಮಗಳ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗೆ ಬಳಸುವ ಪಂಪ್ಸೆಟ್ಗಳ ಕೇಬಲ್ಗಳು ನಿರಂತರವಾಗಿ ಕಳ್ಳತನವಾಗುತ್ತಿದ್ದವು. ಇದರಿಂದ ರೋಸಿಹೋಗಿದ್ದ ರೈತರು ಕಳ್ಳರನ್ನು ಸೆರೆಹಿಡಿಯಲು ಹೊಂಚು ಹಾಕಿ ಕುಳಿತಿದ್ದರು.
ಕದ್ದ ಕೇಬಲ್ ಸಮೇತ ಸಿಕ್ಕಿಬಿದ್ದ ಖದೀಮರು
ಉಪ್ಪರಕನಹಳ್ಳಿ ಗ್ರಾಮದಲ್ಲಿ ಕಳ್ಳರು ಜಮೀನಿಗೆ ನುಗ್ಗಿ ಪಂಪ್ಸೆಟ್ ಕೇಬಲ್ ಕತ್ತರಿಸಿ ಕದಿಯುತ್ತಿದ್ದಾಗ, ಜಾಗೃತರಾಗಿದ್ದ ಗ್ರಾಮಸ್ಥರು ಒಟ್ಟಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಮೂವರು ಕಳ್ಳರು ತಾವು ಕದ್ದ ಕೇಬಲ್ ಸಮೇತ ಗ್ರಾಮಸ್ಥರ ಕೈಗೆ ಅಕ್ಷರಶಃ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಪದೇ ಪದೇ ನಡೆಯುತ್ತಿದ್ದ ಕಳ್ಳತನದಿಂದ ತೀವ್ರ ಆರ್ಥಿಕ ನಷ್ಟ ಅನುಭವಿಸಿದ್ದ ರೈತರ ಆಕ್ರೋಶ ಕಟ್ಟೆಯೊಡೆದಿತ್ತು. ಸಿಕ್ಕಿಬಿದ್ದ ಮೂವರನ್ನೂ ಎಳೆತಂದು ವಿದ್ಯುತ್ ಕಂಬಕ್ಕೆ ಕಟ್ಟಿ, ಹಿಗ್ಗಾಮುಗ್ಗಾ ಥಳಿಸಿ ತಮ್ಮ ಸಿಟ್ಟು ತೀರಿಸಿಕೊಂಡಿದ್ದಾರೆ.
ಪೊಲೀಸರ ವಶಕ್ಕೆ ಕಳ್ಳರ ಗ್ಯಾಂಗ್
ಕಳ್ಳರನ್ನು ಕಂಬಕ್ಕೆ ಕಟ್ಟಿ ಹಾಕಿ ಸಾರ್ವಜನಿಕರು ಥಳಿಸುತ್ತಿರುವ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಕೆರಗೋಡು ಠಾಣೆಯ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ರೊಚ್ಚಿಗೆದ್ದಿದ್ದ ಜನರ ಕೈಯಿಂದ ಕಳ್ಳರನ್ನು ಬಿಡಿಸಿಕೊಂಡ ಪೊಲೀಸರು, ಮೂವರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕಳ್ಳರ ಗ್ಯಾಂಗ್ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆಸಿರುವ ಇತರ ಕೇಬಲ್ ಕಳ್ಳತನ ಪ್ರಕರಣಗಳ ಬಗ್ಗೆಯೂ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೀವ್ರ ವಿಚಾರಣೆ ಮುಂದುವರಿದಿದೆ.

Leave a Reply