ಬೆಂಗಳೂರು: ರಾಜ್ಯದ ಭ್ರಷ್ಟ ಅಧಿಕಾರಿಗಳ ಅಕ್ರಮ ಆಸ್ತಿ ಗಳಿಕೆ ವಿರುದ್ಧ ಕರ್ನಾಟಕ ಲೋಕಾಯುಕ್ತ (Lokayukta Raid) ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಮಹಾ ಸಮರ ಸಾರಿದ್ದಾರೆ. ವಿವಿಧ ಇಲಾಖೆಗಳ ಅಧಿಕಾರಿಗಳು ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿರುವ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ದಾವಣೆಗೆರೆ, ಕಲಬುರಗಿ, ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ಬೀದರ್ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಬೃಹತ್ ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ದಾವಣಗೆರೆ ಹಾಗೂ ಚಿತ್ರದುರ್ಗ: ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ನೇತೃತ್ವದಲ್ಲಿ 3 ಅಧಿಕಾರಿಗಳು ಒಳಗೊಂಡ 12 ಪ್ರತ್ಯೇಕ ತಂಡಗಳು ಒಟ್ಟು 12 ಕಡೆಗಳಲ್ಲಿ ದಾಳಿ ನಡೆಸಿವೆ. ಹುಬ್ಬಳ್ಳಿಯ ವಾಯವ್ಯ ಕೆಎಸ್‌ಆರ್‌ಟಿಸಿ (NWKRTC) ಚೀಫ್ ಮೆಕ್ಯಾನಿಕ್ ಆಗಿರುವ ಸಿದ್ದೇಶ್ವರ ಹೆಬ್ಬಾಳ್ ಅವರಿಗೆ ಸೇರಿದ ದಾವಣಗೆರೆಯ ಆಂಜನೇಯ ಬಡಾವಣೆ ಮನೆ, ಹುಬ್ಬಳ್ಳಿ ಕಚೇರಿ ಸೇರಿದಂತೆ 4 ಕಡೆ ದಾಳಿಯಾಗಿದೆ. ಈ ವೇಳೆ ಸಿದ್ದೇಶ್ವರ ಹೆಬ್ಬಾಳ್ ಮನೆಯಲ್ಲಿ ಬರೋಬ್ಬರಿ 40 ಲಕ್ಷ ರೂಪಾಯಿ ನಗದು ಪತ್ತೆಯಾಗಿದ್ದು ಅಧಿಕಾರಿಗಳನ್ನೇ ಬೆರಗುಗೊಳಿಸಿದೆ. ಇದರ ಬೆನ್ನಲ್ಲೇ ಚಿತ್ರದುರ್ಗ ಬಯಲು ಸೀಮೆ ಪ್ರಾಧಿಕಾರದ ಕಾರ್ಯದರ್ಶಿ ಕೃಷ್ಣ ನಾಯ್ಕ್ ಅವರ ದಾವಣಗೆರೆಯ ಸಿದ್ದವೀರಪ್ಪ ಬಡಾವಣೆ ಮನೆ ಹಾಗೂ ಚಿತ್ರದುರ್ಗ ಕಚೇರಿ ಸೇರಿ 5 ಕಡೆ ದಾಳಿ ನಡೆದಿದೆ. ಇವರೊಂದಿಗೆ ಬೆಳಗಾವಿ ಕೆಆರ್‌ಐಡಿಎಲ್ (KRIDL) ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪ ಅವರಿಗೆ ಸೇರಿದ ಚಿತ್ರದುರ್ಗ, ದಾವಣಗೆರೆ ಮತ್ತು ಬೆಳಗಾವಿಯ ಮನೆಗಳ ಮೇಲೂ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಕಲಬುರಗಿ: ಕಲಬುರಗಿಯಲ್ಲಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದ ತಂಡವು ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ಸೂಪರಿಂಟೆಂಡಿಂಗ್ ಇಂಜಿನಿಯರ್ ಮನೆ ಮೇಲೆ ದಾಳಿ ಮಾಡಿದೆ. ನಗರದ ಗೋದುತಾಯಿ ನಗರದ ನಿವಾಸ ಸೇರಿದಂತೆ ಒಟ್ಟು ಐದು ಕಡೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಇದಲ್ಲದೆ ಇವರಿಗೆ ಸೇರಿದ ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದ ಮನೆ, ಹುಮ್ನಾಬಾದ್‌ನಲ್ಲಿರುವ 2 ವಾಣಿಜ್ಯ ಕಾಂಪ್ಲೆಕ್ಸ್ ಹಾಗೂ ತೋಟದ ಮನೆಯ ಮೇಲೂ ದಾಳಿ ಮುಂದುವರಿದಿದೆ.
ಚಿಕ್ಕಮಗಳೂರು: ಇತ್ತ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಲೋಕಾಯುಕ್ತ ಅಧಿಕಾರಿ ತಿರುಮಲೇಶ್ ನೇತೃತ್ವದ ತಂಡ ಭ್ರಷ್ಟ ಶಿಕಾರಿಗೆ ಇಳಿದಿದೆ. ಅರಣ್ಯ ಇಲಾಖೆಯ ಎಸಿಎಫ್ (ACF) ಮೋಹನ್ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆದಿದೆ. ಇದರ ಮುಂದುವರಿದ ಭಾಗವಾಗಿ ಕಡೂರಿನಲ್ಲಿರುವ ಶ್ರೀನಿವಾಸ್ ಎಂಬುವವರ ಸಹೋದರಿ ಮನೆಯ ಮೇಲೂ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿದ್ದಾರೆ.

Leave a Reply