ದಕ್ಷಿಣ ಚಿತ್ರರಂಗದ ದಂತಕಥೆ ನಿರ್ದೇಶಕ, ಪುಟ್ಟಣ್ಣ ಕಣಗಾಲ್ ಶಿಷ್ಯ ಭಾರತಿರಾಜ ಇನ್ನಿಲ್ಲ..!

ಚೆನ್ನೈ: ಭಾರತೀಯ ಚಿತ್ರರಂಗದ ಖ್ಯಾತ ಬಹುಭಾಷಾ ನಿರ್ದೇಶಕ ಮತ್ತು ನಟ ಭಾರತಿರಾಜ (86) ಅವರು ವೃದ್ಧಾಪ್ಯ ಹಾಗೂ ತೀವ್ರ ಆರೋಗ್ಯ ಸಮಸ್ಯೆಗಳಿಂದಾಗಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ (ಜೂನ್ 10) ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕ್ರಾಂತಿಕಾರಿ ಸಿನಿಮಾಗಳನ್ನು ನೀಡಿದ್ದ ದಂತಕಥೆಯ ಅಗಲಿಕೆಗೆ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ.

ಕನ್ನಡದ ಹೆಮ್ಮೆಯ ಪುಟ್ಟಣ್ಣ ಕಣಗಾಲ್ ಅವರ ಶಿಷ್ಯ!

ಭಾರತಿರಾಜ ಅವರಿಗೂ ಕರ್ನಾಟಕಕ್ಕೂ ಮತ್ತು ಸ್ಯಾಂಡಲ್‌ವುಡ್‌ಗೂ ಭಾವನಾತ್ಮಕ ಸಂಬಂಧವಿತ್ತು. ಕನ್ನಡ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕ ‘ಚಿತ್ರಬ್ರಹ್ಮ’ ಪುಟ್ಟಣ್ಣ ಕಣಗಾಲ್ ಅವರ ಬಳಿ ಭಾರತಿರಾಜ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ಸಿನಿಮಾ ನಿರ್ದೇಶನದ ಕಲೆಯ ಅ ಆ ಇ ಈ ಕಲಿತಿದ್ದರು. ಪುಟ್ಟಣ್ಣ ಅವರ ಮೇಕಿಂಗ್ ಶೈಲಿಯಿಂದ ಪ್ರಭಾವಿತರಾಗಿದ್ದ ಅವರು, ಮುಂದೆ ತಮಿಳಿನಲ್ಲಿ ದೊಡ್ಡ ಇತಿಹಾಸ ಸೃಷ್ಟಿಸಿದರೂ, ಕನ್ನಡದಲ್ಲಿ ಮಾತ್ರ ಯಾವುದೇ ಸಿನಿಮಾವನ್ನು ನಿರ್ದೇಶಿಸಿರಲಿಲ್ಲ.

1977 ರಿಂದ ಆರಂಭವಾದ ಸುದೀರ್ಘ ಸಿನಿಮಾ ಯಾನ:

ಭಾರತಿರಾಜ ಅವರು 1977 ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ತಮಿಳು ಚಿತ್ರ ’16 ವಯತಿನಿಲೆ’ ಮೂಲಕ ಸ್ವತಂತ್ರ ನಿರ್ದೇಶಕರಾಗಿ ರಂಗಪ್ರವೇಶ ಮಾಡಿದರು. ಆನಂತರ ತಮಿಳು ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿದ ‘ಕಿಲಕ್ಕೆ ಪೋಗಮ್ ರೈಲ್’, ‘ಸಿಗಪ್ಪು ರೋಜಕ್ಕಲ್’, ‘ಅಲೈಗಲ್ ಒಯಿವತಿಲ್ಲೈ’, ‘ಕಾದಲ್ ಓವಿಯಂ’, ಮತ್ತು ‘ಮುದಲ್ ಮರಿಯಥೈ’ ನಂತಹ ಅದ್ಭುತ ಸೂಪರ್ ಹಿಟ್ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡಿದರು.

ಕೇವಲ ತಮಿಳು ಮಾತ್ರವಲ್ಲದೆ ತೆಲುಗಿನಲ್ಲೂ ತಮ್ಮ ಮುದ್ರೆ ಒತ್ತಿದ್ದ ಅವರು, ‘ಸೀತಕೋಕ ಚಿಲುಕ’, ‘ಆರಾಧನಾ’, ‘ಜಮದಗ್ನಿ’, ‘ಈತರಂ ಇಲ್ಲು’, ‘ಎರ್ರಾ ಗುಲಾಬಿಲು’ ಹಾಗೂ ‘ಟಿಕ್ ಟಿಕ್ ಟಿಕ್’ ನಂತಹ ಕ್ಲಾಸಿಕ್ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು. 2020 ರಲ್ಲಿ ತೆರೆಕಂಡ ‘ಮೀಂದುಮ್ ಒರು ಮರಿಯಾದೈ’ ಇವರು ನಿರ್ದೇಶಿಸಿದ ಕೊನೆಯ ಚಿತ್ರವಾಗಿದೆ. ನಂತರದ ದಿನಗಳಲ್ಲಿ ಅವರು ನಟನಾಗಿಯೂ ಹಲವು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ಪೋಷಿಸಿ ಗಮನ ಸೆಳೆದಿದ್ದರು.

ಏಕೈಕ ಪುತ್ರನ ಸಾವು ತಂದಿದ್ದ ಆಘಾತ:

ಭಾರತಿರಾಜ ಅವರ ಏಕೈಕ ಪುತ್ರ, ನಟ ಮತ್ತು ನಿರ್ದೇಶಕ ಮನೋಜ್ ಭಾರತಿರಾಜ ಅವರು ಕಳೆದ ವರ್ಷ (2025ರಲ್ಲಿ) ಹಠಾತ್ತಾಗಿ ನಿಧನರಾಗಿದ್ದರು. ಚಿತ್ರರಂಗದಲ್ಲಿ ಬೆಳೆಯುತ್ತಿದ್ದ ಮಗನ ಅಕಾಲಿಕ ಸಾವು ವೃದ್ಧಾಪ್ಯದಲ್ಲಿದ್ದ ಭಾರತಿರಾಜ ಅವರನ್ನು ಮಾನಸಿಕವಾಗಿ ತೀವ್ರವಾಗಿ ಜರ್ಜರಿತಗೊಳಿಸಿತ್ತು. ಈ ಭೀಕರ ದುರಂತದ ನೋವನ್ನು ಮರೆಯಲು ಅವರು ಕುಟುಂಬದೊಂದಿಗೆ ವಿದೇಶಕ್ಕೆ ತೆರಳಿ ಕೆಲವು ದಿನ ಕಳೆದಿದ್ದರು. ಆದರೆ ಚೆನ್ನೈಗೆ ಮರಳಿದ ನಂತರ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿ, ಇದೀಗ ಇಡೀ ಚಿತ್ರರಂಗವನ್ನು ಕಡುಕತ್ತಲಿಗೆ ತಳ್ಳಿ ಅವರು ವಿಧಿವಶರಾಗಿದ್ದಾರೆ.

Leave a Reply

Your email address will not be published. Required fields are marked *