ಮಾರುವೇಷ ಬಿಟ್ಟು ನೇರವಾಗಿ ಬೆಂಗಳೂರು ಆಶ್ರಮಕ್ಕೆ ಬಂದ ರಜನಿಕಾಂತ್! ಗನ್‌ಮ್ಯಾನ್ ಇಲ್ಲ, ಬಾಡಿಗಾರ್ಡ್‌ಗಳೂ ಇಲ್ಲ!

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ತೆರೆಮೇಲೆ ಎಷ್ಟು ಅದ್ಧೂರಿಯಾಗಿ ಕಾಣಿಸುತ್ತಾರೋ, ತೆರೆಹಿಂದೆ ಅಷ್ಟೇ ಸರಳ ಜೀವನ ನಡೆಸುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸದಾ ಆಧ್ಯಾತ್ಮದ ಕಡೆಗೆ ಒಲವು ಹೊಂದಿರುವ ರಜನಿಕಾಂತ್ ಅವರು ಜೂನ್ 19 ರಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ಯಾವುದೇ ಸದ್ದು-ಗದ್ದಲವಿಲ್ಲದೆ ಭೇಟಿ ನೀಡಿ ಹೋಗಿದ್ದಾರೆ.

ಮೊದಲೆಲ್ಲಾ ಅಭಿಮಾನಿಗಳ ಗದ್ದಲದಿಂದ ತಪ್ಪಿಸಿಕೊಳ್ಳಲು ಬೆಂಗಳೂರಿಗೆ ಮಾರುವೇಷದಲ್ಲಿ ಬರುತ್ತಿದ್ದ ರಜನಿಕಾಂತ್, ಈ ಬಾರಿ ಅತ್ಯಂತ ಸಾಮಾನ್ಯರಂತೆ ಬಿಳಿ ಕುರ್ತಾ ಮತ್ತು ಪಂಚೆ ಧರಿಸಿ ಆಶ್ರಮಕ್ಕೆ ಆಗಮಿಸಿದ್ದರು. ವಿಶೇಷವೆಂದರೆ, ದೇಶದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಈ ನಟನ ಜೊತೆಗೆ ಯಾವುದೇ ಬಾಡಿಗಾರ್ಡ್ ಆಗಲಿ ಅಥವಾ ಗನ್‌ಮ್ಯಾನ್ ಆಗಲಿ ಇರಲಿಲ್ಲ. ಆಶ್ರಮಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ ಅವರು ಅತ್ಯಂತ ಸರಳವಾಗಿ ಮರಳಿ ಹೋಗಿದ್ದಾರೆ.

ವೈರಲ್ ಆಯಿತು ವಿಡಿಯೋ: ರಜನಿಕಾಂತ್ ಅವರು ಆಶ್ರಮಕ್ಕೆ ಬಂದು ಬಿಳಿ ಬಣ್ಣದ ಕಾರು ಹತ್ತಿ ಹೊರಡುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘Extra_Flavour96’ ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವಿಡಿಯೋ ಶೇರ್ ಆಗಿದ್ದು, ಸೂಪರ್‌ಸ್ಟಾರ್ ರಜನಿಕಾಂತ್ ಅವರ ಈ ಅಪರೂಪದ ಸರಳತೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ಆಶ್ರಮದಲ್ಲಿದ್ದ ಕೆಲ ಅಭಿಮಾನಿಗಳು ರಜನಿ ಅವರನ್ನು ಮಾತನಾಡಿಸಿ, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ‘ಆರ್ಟ್ ಆಫ್ ಲಿವಿಂಗ್’ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಜನಿಕಾಂತ್ ತಮ್ಮ ಹಳೆಯ ದಿನಗಳ ಆಧ್ಯಾತ್ಮಿಕ ಅನುಭವವನ್ನು ಹಂಚಿಕೊಂಡಿದ್ದರು. “ಒಮ್ಮೆ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಬಂದಾಗ ಅಭಿಮಾನಿಗಳು ನನ್ನ ಮೇಲೆ ಮುಗಿಬೀಳಬಹುದು ಎಂದುಕೊಂಡಿದ್ದೆ. ಆದರೆ ಅಲ್ಲಿ ಯಾರೂ ಆ ರೀತಿ ಮಾಡಲಿಲ್ಲ. ಆ ಕ್ಷಣದಲ್ಲೇ ನನ್ನಲ್ಲಿದ್ದ ‘ಸ್ಟಾರ್‌ಡಮ್’ ಎಂಬ ಅಹಂ ಸಂಪೂರ್ಣವಾಗಿ ಕರಗಿ ಹೋಗಿತ್ತು” ಎಂದು ಅವರು ನೆನಪಿಸಿಕೊಂಡಿದ್ದರು.

Leave a Reply

Your email address will not be published. Required fields are marked *