ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ 2019 ರ ಮೈತ್ರಿ ಸರ್ಕಾರ ಪತನ ಹಾಗೂ ಆಪರೇಷನ್ ಕಮಲದ ಕುರಿತಾಗಿ ಮಾಜಿ ಸಚಿವ, ಬಿಜೆಪಿಯಿಂದ ಉಚ್ಛಾಟಿತರಾಗಿರುವ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಜುಲೈ 23, 2019 ರಂದು 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡು ಪತನಗೊಂಡಿತ್ತು. ತದನಂತರ ಜುಲೈ 26, 2019 ರಂದು ಬಿ.ಎಸ್. ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಕುದುರೆ ವ್ಯಾಪಾರ ನಡೆಸಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಗಂಭೀರ ಆರೋಪ ಮಾಡಿದ್ದರೂ, ಬಿಜೆಪಿ ಅದನ್ನು ಸಾರಾಸಗಟಾಗಿ ತಳ್ಳಿಹಾಕುತ್ತಾ ಬಂದಿತ್ತು. ಆದರೆ ಈಗ ಈಶ್ವರಪ್ಪ ನೀಡಿರುವ ಹೇಳಿಕೆಯು ಅಂದಿನ ರಾಜಕೀಯ ಆರೋಪಗಳಿಗೆ ಪೂರ್ಣ ಪ್ರಮಾಣದ ಪುಷ್ಟಿ ನೀಡುವಂತಿದೆ.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲವು ಬಿಜೆಪಿ ಶಾಸಕರು ಅಡ್ಡ ಮತದಾನ (Cross Voting) ಮಾಡಿರುವ ವಿಚಾರವಾಗಿ, ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ಮುಂದಾಗಿರುವ ಸದ್ಯದ ಬಿಜೆಪಿ ನಾಯಕರ ನಿರ್ಧಾರಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಈಶ್ವರಪ್ಪ ಹಳೆಯ ನೆನಪನ್ನು ಕೆದಕಿದ್ದಾರೆ. ಹಿಂದೆ 17 ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಕೋಟ್ಯಂತರ ರೂಪಾಯಿ ಹಣ ನೀಡಿ ಖರೀದಿಸುವ ಮೂಲಕವೇ ನಾವು ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಚನೆ ಮಾಡಿದ್ದೆವು ಎಂದು ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಆ ಅಡ್ಡದಾರಿ ನಿರ್ಧಾರದಿಂದ ಆಗ ನಮಗೆ ತಾತ್ಕಾಲಿಕವಾಗಿ ಜಯ ಸಿಕ್ಕಿ ಅಧಿಕಾರ ಹಿಡಿದಿದ್ದರೂ, ಅಂತಿಮವಾಗಿ ನಮ್ಮ ಸ್ವಂತ ಸರ್ಕಾರವೇ ಸಂಪೂರ್ಣವಾಗಿ ಹಾಳಾಗಲು ಅಂದು ನಾವು ಮಾಡಿದ ಆ ತಪ್ಪೇ ಮುಖ್ಯ ಕಾರಣವಾಯಿತು ಎಂದು ಹೇಳುವ ಮೂಲಕ ಸ್ವಪಕ್ಷದ ವಿರುದ್ಧವೇ ಬಾಂಬ್ ಸಿಡಿಸಿದ್ದಾರೆ.
ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಕೋಟ್ಯಂತರ ಭಕ್ತರಿದ್ದಾರೆ, ಆದ್ದರಿಂದ ರಾಜಕೀಯದ ಇಂತಹ ಗೊಂದಲಗಳಿಗಾಗಿ ಆಣೆ ಪ್ರಮಾಣ ಮಾಡುವ ನಿರ್ಧಾರದಿಂದ ಬಿ.ವೈ. ವಿಜಯೇಂದ್ರ ಮೊದಲು ಹಿಂದೆ ಸರಿಯಬೇಕು ಎಂದು ಈಶ್ವರಪ್ಪ ಸಲಹೆ ನೀಡಿದ್ದಾರೆ. ಅಡ್ಡ ಮತದಾನ ಮಾಡಿದವರು ಮಂಜುನಾಥನ ಮುಂದೆ ಸುಳ್ಳು ಆಣೆ ಮಾಡಿ, ಅಣ್ಣಪ್ಪ ಸ್ವಾಮಿ ಮುಂದೆ ಕ್ಷಮೆ ಕೇಳಿದರೆ ಅದಕ್ಕೆ ಯಾವುದೇ ಬೆಲೆ ಇರುವುದಿಲ್ಲ ಎಂದಿದ್ದಾರೆ.
ಇದೇ ವೇಳೆ ಹಿಂದೆ ಶಿವಮೊಗ್ಗದ ವಾರ್ಡ್ ಚುನಾವಣೆ ಸಂದರ್ಭದಲ್ಲಿ ನಡೆದ ಆಣೆ ಪ್ರಮಾಣದ ಸ್ವಾರಸ್ಯಕರ ಪ್ರಸಂಗವೊಂದನ್ನು ಉದಾಹರಣೆಯಾಗಿ ನೀಡಿದ ಅವರು, ಅಭ್ಯರ್ಥಿಯೊಬ್ಬ ಸಿಗಂದೂರು ಚೌಡೇಶ್ವರಿ ದೇವಿಯ ಫೋಟೋ ನೀಡಿ, 5 ರೂಪಾಯಿ ಕೊಟ್ಟು ತನಗೇ ಮತಹಾಕುವಂತೆ ಆಣೆ ಮಾಡಿಸಿದ್ದ, ಆದರೆ ಮರುದಿನ ಮತ್ತೊಬ್ಬ ಅಭ್ಯರ್ಥಿ ಮಾರಮ್ಮನ ಫೋಟೋ ಜೊತೆ 10 ರೂಪಾಯಿ ಕೊಟ್ಟು ಆಣೆ ಮಾಡಿಸಿದ್ದ, ಕೊನೆಗೆ 10 ರೂಪಾಯಿ ಕೊಟ್ಟವನೇ ಚುನಾವಣೆಯಲ್ಲಿ ಗೆದ್ದ ಎಂದು ಲೇವಡಿ ಮಾಡಿದರು. ಪ್ರಸ್ತುತ ಪರಿಷತ್ ಅಡ್ಡ ಮತದಾನ ವಿಚಾರದಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿದ್ದು, ಈ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಅವರು ಬಲವಾಗಿ ಆಗ್ರಹಿಸಿದ್ದಾರೆ.

Leave a Reply