Karnataka Weather | ಮುಂದಿನ 7 ದಿನ ರಾಜ್ಯದಲ್ಲಿ ಹವಾಮಾನ ಬದಲಾವಣೆ: ಜೂನ್ 4ರವರೆಗೆ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ!

ಬೆಂಗಳೂರು: ರಾಜ್ಯದ ಜನತೆ ಹಾಗೂ ರೈತರು ಕಾತುರದಿಂದ ಕಾಯುತ್ತಿರುವ ಈ ವರ್ಷದ ಮುಂಗಾರು (Monsoon) ಮಳೆಯ ಪ್ರವೇಶದ ಕುರಿತು ಹವಾಮಾನ ಇಲಾಖೆ ಮಹತ್ವದ ಮುನ್ಸೂಚನೆ ನೀಡಿದೆ. ಜೂನ್ 4 ರಂದು ಮುಂಗಾರು ಮಳೆಯು ರಾಜ್ಯವನ್ನು ಪ್ರವೇಶಿಸಲಿದೆ. ಆದರೆ, ಆರಂಭದಲ್ಲಿ ಇದು ಅತ್ಯಂತ ದುರ್ಬಲವಾಗಿರಲಿದ್ದು, ಜೂನ್ 8 ರ ಸುಮಾರಿಗೆ ಕೊಂಚ ಚುರುಕಾಗುವ ಲಕ್ಷಣಗಳಿವೆ ಎಂದು ಅಂದಾಜಿಸಲಾಗಿದೆ.

ಜೂನ್ 7 ರ ಸುಮಾರಿಗೆ ಕರಾವಳಿ ಜಿಲ್ಲೆಗಳಿಗೆ ಹಾಗೂ ಜೂನ್ 7 ಅಥವಾ 8 ರ ವೇಳೆಗೆ ಮಲೆನಾಡು ಜಿಲ್ಲೆಗಳಿಗೆ ಮುಂಗಾರು ಅಧಿಕೃತವಾಗಿ ಆಗಮಿಸಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಮುಂಗಾರು ಆರಂಭದಲ್ಲಿ ದುರ್ಬಲವಾಗಿರುವ ವರದಿಗಳು ರೈತರಲ್ಲಿ ಆತಂಕ ಮೂಡಿಸಿದ್ದು, ಸಿಗುವ ಅಲ್ಪಸ್ವಲ್ಪ ಮಳೆನೀರನ್ನು ಕೃಷಿ ಹೊಂಡಗಳ ಮೂಲಕ ಸಂಗ್ರಹಿಸಿಕೊಳ್ಳಲು ಸರ್ಕಾರ ಭರ್ಜರಿ ಸಹಾಯಧನ ನೀಡುತ್ತಿದೆ. ಆಸಕ್ತ ರೈತರು ತಕ್ಷಣವೇ ಸ್ಥಳೀಯ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.

ದಕ್ಷಿಣ ಒಳನಾಡು: ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿ ವೇಳೆಗೆ ಗುಡುಗು ಸಹಿತ ಮಳೆಯಾಗುವುದು ಖಚಿತವಾಗಿದೆ. ಇನ್ನು ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸದ್ಯಕ್ಕೆ ಮೋಡ ಕವಿದ ವಾತಾವರಣ ಇರಲಿದ್ದು, ಗಾಳಿಯ ಒತ್ತಡ ಹೆಚ್ಚಾದರೆ ಮಾತ್ರ ಮಳೆ ಸುರಿಯಲಿದೆ.

ಉತ್ತರ ಒಳನಾಡು: ರಣಭೀಕರ ಬಿರುಗಾಳಿ ಎಚ್ಚರಿಕೆ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇರುವುದಿಲ್ಲ. ಆದರೆ, ಜೂನ್ 1 ರಿಂದ ಜೂನ್ 4 ರವರೆಗೆ ಗಂಟೆಗೆ ಬರೋಬ್ಬರಿ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಭಾರಿ ಬಿರುಗಾಳಿ ಬೀಸಲಿದ್ದು, ಗುಡುಗು ಸಿಡಿಲು ಸಹಿತ ಲಘು ಮಳೆಯಾಗುವ ಸಾಧ್ಯತೆ ಇದೆ. ಗದಗ್, ಹಾವೇರಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಅಲ್ಲಲ್ಲಿ ಜೂನ್ 1 ರಿಂದಲೇ ಸಂಜೆ ಹಾಗೂ ರಾತ್ರಿ ವೇಳೆ ಗುಡುಗು ಸಹಿತ ಮಳೆಯಾಗಲಿದೆ. ಗಾಳಿಯ ದಿಕ್ಕು ಬದಲಾದರೆ ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲೂ ಮಳೆ ಅಪ್ಪಳಿಸಬಹುದು.

ಮಲೆನಾಡು ಮತ್ತು ಕರಾವಳಿ ಭಾಗ: ಮಲೆನಾಡಿನ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಂಜೆ ಮತ್ತು ರಾತ್ರಿ ವೇಳೆ ಗುಡುಗು ಸಹಿತ ಮಳೆಯ ಆರ್ಭಟ ಶುರುವಾಗಲಿದ್ದು, ಶಿವಮೊಗ್ಗದ ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಇತ್ತ ಕರಾವಳಿಯ ಕಾಸರಗೋಡು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಮೋಡದ ಕಣ್ಣಾಮುಚ್ಚಾಲೆ ಇರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆ ಹಾಗೂ ತಡರಾತ್ರಿ ಕರಾವಳಿ ತೀರದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *