ವರ್ಗಾವಣೆಗೊಂಡ ಸರ್ಕಾರಿ ನೌಕರರಿಗೆ ಸ್ಥಳ ನಿಯುಕ್ತಿ ನಿಯಮ ಬದಲಿಸಿದ ರಾಜ್ಯ ಸರ್ಕಾರ: CM ಅನುಮೋದನೆ ಕಡ್ಡಾಯ

ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ವರ್ಗಾವಣೆಗೊಂಡ ನೌಕರರಿಗೆ ಮುಂದಿನ ಸ್ಥಳ ನಿಯುಕ್ತಿ (ಪೋಸ್ಟಿಂಗ್) ನೀಡದೆ ಕಡ್ಡಾಯ ನಿರೀಕ್ಷಣೆಯಲ್ಲಿ ಇರಿಸುವ ಬಗ್ಗೆ ಈ ಹಿಂದೆ ಹೊರಡಿಸಲಾಗಿದ್ದ ಕಟ್ಟುನಿಟ್ಟಿನ ಸುತ್ತೋಲೆಯನ್ನು ವಾಪಸ್ ಪಡೆದಿರುವ ಸರ್ಕಾರ, ಇದೀಗ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. 

ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ 35777/2025 ರಲ್ಲಿ ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ ಮಾರ್ಚ್ 30, 2026 ರಂದು ಹೊರಡಿಸಲಾಗಿದ್ದ ಸುತ್ತೋಲೆಯನ್ನು ಆಡಳಿತಾತ್ಮಕ ತೊಂದರೆಗಳ ಕಾರಣದಿಂದಾಗಿ ಹಿಂಪಡೆಯಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸ್ಪಷ್ಟಪಡಿಸಿದೆ. ಅಬಕಾರಿ ಉಪ ಆಯುಕ್ತ ಕೆ.ಅರುಣ್ ಕುಮಾರ್ ಅವರು ಸ್ಥಳ ನಿಯುಕ್ತಿ ನೀಡದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ.

ಹೊಸ ಮಾರ್ಗಸೂಚಿಗಳ ಅನ್ವಯ, ಸಾಮಾನ್ಯವಾಗಿ ಯಾವುದೇ ಅಧಿಕಾರಿ ಅಥವಾ ನೌಕರರನ್ನು ವರ್ಗಾವಣೆ ಮಾಡುವಾಗ ಮುಂದಿನ ಹುದ್ದೆಯನ್ನು ಸೂಚಿಸದೇ ವರ್ಗಾವಣೆ ಮಾಡುವಂತಿಲ್ಲ. ಆದರೆ, ಆಡಳಿತಾತ್ಮಕ ಅನಿವಾರ್ಯತೆಗಳಿಂದಾಗಿ ತಕ್ಷಣವೇ ಸ್ಥಳ ನಿಯುಕ್ತಿ ನೀಡಲು ಸಾಧ್ಯವಾಗದಿದ್ದಲ್ಲಿ, ಅಂತಹ ನೌಕರರನ್ನು ಸಕ್ಷಮ ಪ್ರಾಧಿಕಾರಿಗಳ ಮಟ್ಟದಲ್ಲಿ ಗರಿಷ್ಠ 1 ತಿಂಗಳವರೆಗೆ ಮಾತ್ರ ಕಡ್ಡಾಯ ನಿರೀಕ್ಷಣೆಯಲ್ಲಿ ಇರಿಸಬಹುದು. ಕಾನೂನು ಸಮಸ್ಯೆಗಳು, ಅಮಾನತು, ಹಣಕಾಸು ದುರ್ಬಳಕೆ, ಅಧಿಕಾರ ದುರುಪಯೋಗ ಅಥವಾ ಗಂಭೀರ ಇಲಾಖಾ ವಿಚಾರಣೆ ಎದುರಿಸುತ್ತಿರುವ ಪ್ರಕರಣಗಳನ್ನು ಹೊರತುಪಡಿಸಿ, ಸಾಮಾನ್ಯ ವರ್ಗಾವಣೆಗಳಲ್ಲಿ 1 ತಿಂಗಳಿಗಿಂತ ಹೆಚ್ಚು ಕಾಲ ಹುದ್ದೆ ತೋರಿಸದೆ ಕಾಯಿಸುವಂತಿಲ್ಲ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಒಂದು ವೇಳೆ ಆಡಳಿತಾತ್ಮಕ ಅನಿವಾರ್ಯತೆಯಿಂದಾಗಿ ವರ್ಗಾವಣೆಗೊಂಡ ಅಧಿಕಾರಿಯನ್ನು 1 ತಿಂಗಳಿಗಿಂತ ಹೆಚ್ಚು ಕಾಲ ಕಡ್ಡಾಯ ನಿರೀಕ್ಷಣೆಯಲ್ಲಿ ಮುಂದುವರಿಸಬೇಕಾದ ಪರಿಸ್ಥಿತಿ ಎದುರಾದರೆ, ಸಕ್ಷಮ ಪ್ರಾಧಿಕಾರವು ಅದಕ್ಕೆ ಸೂಕ್ತ ಕಾರಣಗಳನ್ನು ಲಿಖಿತವಾಗಿ ದಾಖಲಿಸುವುದು ಕಡ್ಡಾಯವಾಗಿದೆ. ಅಷ್ಟೇ ಅಲ್ಲದೆ, ಇದಕ್ಕೆ ಮಾನ್ಯ ಮುಖ್ಯಮಂತ್ರಿಯವರ ಪೂರ್ವಾನುಮೋದನೆಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದ್ದು, ಸಿಎಂ ಒಪ್ಪಿಗೆಯೊಂದಿಗೆ ಗರಿಷ್ಠ 3 ತಿಂಗಳವರೆಗೆ ಮಾತ್ರ ಅಧಿಕಾರಿಯನ್ನು ಕಡ್ಡಾಯ ನಿರೀಕ್ಷಣೆಯಲ್ಲಿ ಇರಿಸಲು ಅವಕಾಶ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *