ಭೀಕರ ರಸ್ತೆ ಅಪಘಾತ; ಮಂತ್ರಾಲಯ ಯಾತ್ರೆಗೆ ಹೊರಟಿದ್ದ ನಾಲ್ವರು ಸ್ಥಳದಲ್ಲೇ ಸಾ*ವು!

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಇಂದು ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಲಾರಿಯೊಂದು ಡಿವೈಡರ್ ದಾಟಿ ಬಂದು ಓಮಿನಿ ಕಾರಿಗೆ ನೇರ ಡಿಕ್ಕಿ ಹೊಡೆದ ಪರಿಣಾಮ, ಮಂತ್ರಾಲಯಕ್ಕೆ ತೀರ್ಥಯಾತ್ರೆ ಹೊರಟಿದ್ದ ಒಂದೇ ಗ್ರಾಮದ ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಅಪಘಾತದಲ್ಲಿ ಆರು ಜನರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಬ್ಬಾರ್ ಗ್ರಾಮದ ಒಂದೇ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ಓಮ್ನಿ ವಾಹನದಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ಅತಿ ವೇಗವಾಗಿ ಬರುತ್ತಿದ್ದ ಅಶೋಕ್ ಲೇಲ್ಯಾಂಡ್ ಟ್ರಕ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ದಾಟಿ ಬಂದು ಓಮ್ನಿ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಓಮಿನಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಘಟನೆಯಲ್ಲಿ ಕಬ್ಬಾರ್ ಗ್ರಾಮದ ಕೆಂಚಮ್ಮ ಬಾಳೆಕಾಯಿ (35 ವರ್ಷ), ಅಮೃತಾ ಕೋಟ್ಯಾಳ್ (25 ವರ್ಷ), ರಮೇಶ್ ಬಳ್ಳಾರಿ (45 ವರ್ಷ) ಹಾಗೂ ಪ್ರವೀಣ್ (23 ವರ್ಷ) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಧಾರ್ಮಿಕ ಪ್ರವಾಸಕ್ಕೆ ಹೊರಟಿದ್ದವರು ಅರ್ಧ ಹಾದಿಯಲ್ಲೇ ಹೆದ್ದಾರಿ ಅಪಘಾತಕ್ಕೆ ಬಲಿಯಾಗಿರುವುದು ಇಡೀ ಗ್ರಾಮವನ್ನು ಕಣ್ಣೀರಲ್ಲಿ ಮುಳುಗಿಸಿದೆ.

 ಅಪಘಾತದಲ್ಲಿ ಗಾಯಗೊಂಡಿರುವ ಆರು ಜನರನ್ನು ತಕ್ಷಣವೇ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ನಾಲ್ಕು ಮಕ್ಕಳು ಸೇರಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

 ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟ್ರಕ್ ಚಾಲಕನ ಅತಿ ವೇಗ ಮತ್ತು ಬೇಜವಾಬ್ದಾರಿಯೇ ಅಪಘಾತಕ್ಕೆ ಪ್ರಾಥಮಿಕ ಕಾರಣ ಎಂದು ತಿಳಿದುಬಂದಿದ್ದು, ಕುಕನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *