ಕಲಬುರಗಿ: ಜಿಲ್ಲೆಯ ಶಹಾಬಾದ್ ತಾಲೂಕಿನಲ್ಲಿ ಪೋಷಕರ ಕಣ್ಣಲ್ಲಿ ರಕ್ತ ಬರಿಸುವಂತಹ ಅತ್ಯಂತ ಕರುಣಾಜನಕ ಘಟನೆಯೊಂದು ನಡೆದಿದೆ. ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಡಿಕ್ಕಿ ಒಳಗೆ ಆಟವಾಡಲು ಹೋಗಿ ಸಿಲುಕಿಕೊಂಡ 3 ವರ್ಷದ ಮುಗ್ಧ ಮಗುವೊಂದು ಉಸಿರುಗಟ್ಟಿ (Suffocation) ದಾರುಣವಾಗಿ ಸಾವನ್ನಪ್ಪಿದೆ.
ಮೃತಪಟ್ಟ ದುರ್ದೈವಿ ಬಾಲಕನನ್ನು ಕೊಟ್ಟುರೇಶ್ವರ ಪೂಜ್ಯರವರ ಪುತ್ರ ಬಸವಪ್ರಭು (3 ವರ್ಷ) ಎಂದು ಗುರುತಿಸಲಾಗಿದೆ. ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ತೊನಸನಹಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಬಾಲಕ ಬಸವಪ್ರಭು ಇಂದು ಎಂದಿನಂತೆ ತನ್ನ ಮನೆಯ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಬಳಿ ಆಟವಾಡುತ್ತಿದ್ದ ಎನ್ನಲಾಗಿದೆ.
ಆಟದ ಮೂಡ್‌ನಲ್ಲಿದ್ದ ಮಗು, ಕಾರಿನ ಡಿಕ್ಕಿ (Car Boot) ತೆರೆದಿದ್ದನ್ನು ಗಮನಿಸಿ ಅದರ ಒಳಗಡೆ ಹೋಗಿ ಕುಳಿತಿದೆ. ಆದರೆ, ದುರಾದೃಷ್ಟವಶಾತ್ ಅದೇ ಸಮಯದಲ್ಲಿ ಕಾರಿನ ಡಿಕ್ಕಿ ಏಕಾಏಕಿ ಧಪ್ಪನೆ ಮುಚ್ಚಿಕೊಂಡು ಆಟೋಮ್ಯಾಟಿಕ್ ಆಗಿ ಲಾಕ್ ಆಗಿದೆ. ಕೇವಲ 3 ವರ್ಷದ ಮಗುವಾಗಿದ್ದರಿಂದ ಒಳಗಿನಿಂದ ಡಿಕ್ಕಿಯನ್ನು ಹೇಗೆ ತೆರೆಯಬೇಕು ಎಂಬುದು ತಿಳಿಯದೆ, ಗಾಳಿಯಾಡದೇ ಮಗು ಒಳಗಡೆಯೇ ತೀವ್ರವಾಗಿ ಒದ್ದಾಡಿದೆ.
ಕೆಲ ಹೊತ್ತಿನ ಬಳಿಕ ಮಗು ಕಾಣದೆ ಇದ್ದಾಗ ಗಾಬರಿಗೊಂಡ ಪೋಷಕರು ಮತ್ತು ಕುಟುಂಬಸ್ಥರು ಇಡೀ ಗ್ರಾಮದಲ್ಲಿ ಮಗುವಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಎಲ್ಲೂ ಸಿಗದಿದ್ದಾಗ ಸಂಶಯಗೊಂಡು ಮನೆ ಮುಂದಿನ ಕಾರಿನ ಡಿಕ್ಕಿ ತೆರೆದು ನೋಡಿದಾಗ ಪೋಷಕರಿಗೆ ಭಾರಿ ಆಘಾತ ಕಾದಿತ್ತು. ಮಗು ಬಸವಪ್ರಭು ಡಿಕ್ಕಿಯ ಒಳಗಡೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ತಕ್ಷಣವೇ ಹೊರತೆಗೆದರೂ ಅಷ್ಟರಲ್ಲೇ ಉಸಿರುಗಟ್ಟಿ ಮೃತಪಟ್ಟಿತ್ತು.
ಮಗುವಿನ ಕಳೇಬರ ನೋಡಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಶಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Leave a Reply