ಮಂಡ್ಯ: ಸಕ್ಕರೆ ನಗಡು ಮಂಡ್ಯದ ನೆಹರು ನಗರದಲ್ಲಿ ಜೂನ್ 9 ರಂದು ಕರುಳು ಹಿಂಡುವ ಘಟನೆಯೊಂದು ನಡೆದಿದೆ. ಬಟ್ಟೆ ವ್ಯಾಪಾರ ಮಾಡುತ್ತಿದ್ದ ಪ್ರಭಾಕರ್ (65) ಎಂಬುವವರು ಸಾಲದ ಒತ್ತಡ ಹಾಗೂ ಖಾಸಗಿ ಫೈನಾನ್ಸ್ಗಳ ಕಿರುಕುಳ ತಾಳಲಾರದೆ ತಮ್ಮ ಪತ್ನಿ ಜ್ಯೋತಿ (55) ಮತ್ತು ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಗ ಸಂತೋಷ್ (30) ಅವರನ್ನ ಉಸಿರುಗಟ್ಟಿಸಿ ಕೊಲೆ ಮಾಡಿ, ನಂತರ ತಮ್ಮದೇ ಬಟ್ಟೆ ಅಂಗಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತನಿಖೆಯ ಪ್ರಕಾರ, ಈ ಭೀಕರ ಕೃತ್ಯವು ತಡರಾತ್ರಿ ಸುಮಾರು 3:30ರ ಸಮಯದಲ್ಲಿ ನಡೆದಿದೆ. ಪ್ರಭಾಕರ್ ಮೊದಲು ತನ್ನ ಪತ್ನಿ ಜ್ಯೋತಿಯನ್ನು ವೇಲ್ನಿಂದ (ಕುರ್ತಾ ಶಾಲು) ಮುಖವನ್ನು ಒತ್ತಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಈ ವೇಳೆ ಗಲಾಟೆ ಕೇಳಿ ತಡೆಯಲು ಬಂದ ಮಗ ಸಂತೋಷ್ನನ್ನೂ ಸಹ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ವಿಷಾದದ ಸಂಗತಿಯೆಂದರೆ, ಮಗ ಸಂತೋಷ್ಗೆ ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಘಟನೆ ನಡೆದಾಗ ಬೆಳಗಿನ ಜಾವ 3:30 ಆಗಿದ್ದರಿಂದ ಹೊಸ ಸೊಸೆ ಪಕ್ಕದ ಕೋಣೆಯಲ್ಲಿ ಗಾಢ ನಿದ್ರೆಯಲ್ಲಿದ್ದಳು. ಬೆಳಿಗ್ಗೆ ಎದ್ದು ತಿಂಡಿ ರೆಡಿ ಮಾಡಿ, ಅತ್ತೆ-ಮಾವನನ್ನು ಎಬ್ಬಿಸಲು ರೂಂಗೆ ತೆರಳಿದಾಗ ಇಬ್ಬರೂ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಸ್ವಂತ ಮಾವನೇ ಗಂಡ ಹಾಗೂ ಅತ್ತೆಯನ್ನು ಕೊಲೆ ಮಾಡಿರುವುದು ತಿಳಿಯದೇ ಸೊಸೆ ಕಣ್ಣೀರಿಟ್ಟಿದ್ದಾಳೆ.
ಡೆತ್ನೋಟ್ನಲ್ಲಿ ‘ಫ್ರೀ ಬಸ್’ ಮತ್ತು ‘ಫೈನಾನ್ಸ್ ಕಿರುಕುಳ’ ಉಲ್ಲೇಖ!
ಕುಟುಂಬವನ್ನು ಮುಗಿಸಿದ ನಂತರ ಪ್ರಭಾಕರ್ ನೇರವಾಗಿ ತನ್ನ ಬಟ್ಟೆ ಅಂಗಡಿಗೆ ತೆರಳಿ ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಆತ ಬರೆದಿಟ್ಟಿರುವ ರೋಚಕ ಡೆತ್ನೋಟ್ (Death Note) ಪೊಲೀಸರಿಗೆ ಸಿಕ್ಕಿದ್ದು, ಅದರಲ್ಲಿ ತನ್ನ ಸಾವಿಗೆ ಮತ್ತು ವ್ಯಾಪಾರ ನಷ್ಟಕ್ಕೆ ಕಾರಣಗಳನ್ನು ಬಿಚ್ಚಿಟ್ಟಿದ್ದಾನೆ.
ಸರ್ಕಾರ ಮಹಿಳೆಯರಿಗೆ ಉಚಿತ ಬಸ್ (Free Bus Scheme) ಸೌಲಭ್ಯ ಘೋಷಿಸಿದಾಗಿನಿಂದ ಜನರು ಮಂಡ್ಯ ಬಿಟ್ಟು ಬೆಂಗಳೂರು, ಮೈಸೂರಿಗೆ ಶಾಪಿಂಗ್ ಮಾಡಲು ಹೋಗುತ್ತಿದ್ದಾರೆ. ಇದರಿಂದ ನಮ್ಮ ಸ್ಥಳೀಯ ಬಟ್ಟೆ ವ್ಯಾಪಾರ ಸಂಪೂರ್ಣ ಕುಸಿದುಬಿದ್ದಿದೆ. ವ್ಯಾಪಾರವಿಲ್ಲದೆ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಖಾಸಗಿ ಫೈನಾನ್ಸ್ನವರು ಸಾಲ ಕಟ್ಟದಿದ್ದರೆ ಮನೆ ಬಳಿ ಬಂದು ಮರ್ಯಾದೆ ತೆಗೆಯುವುದಾಗಿ ಬೆದರಿಸುತ್ತಿದ್ದಾರೆ. ಈ ಸಾಲದ ಕಿರುಕುಳದಿಂದ ಮನನೊಂದು ನಾನು ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆ ಎಂದು ಮೃತ ಪ್ರಭಾಕರ್ ಪತ್ರದಲ್ಲಿ ಬರೆದಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಡೆತ್ನೋಟ್ ಅನ್ನು ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಲಾಗಿದೆ. ನವವಿವಾಹಿತೆಯಾಗಿದ್ದ ಸೊಸೆಯ ಆಕ್ರಂದನ ಸ್ಥಳದಲ್ಲಿ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. ಖಾಸಗಿ ಫೈನಾನ್ಸ್ ಕಂಪನಿಗಳ ವಿರುದ್ಧ ಇಲಾಖೆ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Leave a Reply