ಹಾಸನ: ಸಾಂಸ್ಕೃತಿಕ ನಗರಿ ಹಾಸನದಲ್ಲಿ(Hassan) ಹೆಣ್ಣುಮಕ್ಕಳಿಗೆ ರಕ್ಷಣೆಯೇ ಇಲ್ಲದಂತಾಗಿದೆಯೇ ಎಂಬ ಆತಂಕ ಮೂಡಿಸುವಂತಹ ಘಟನೆಯೊಂದು ವರದಿಯಾಗಿದೆ. ನಗರದ 80 ಅಡಿ ರಸ್ತೆಯ ಬಳಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸಾಗರ್ ಎಂಬ ಯುವಕ ಪೈಶಾಚಿಕವಾಗಿ ಅತ್ಯಾಚಾರ (Rape)ಎಸಗಿದ್ದಾನೆ.
ನಗರದಲ್ಲಿ ಪಾನಿಪುರಿ ವ್ಯಾಪಾರ ಮಾಡುತ್ತಿದ್ದ 21 ವರ್ಷದ ಯುವಕ ಸಾಗರ್, ಒಂಟಿಯಾಗಿದ್ದ ಡಿಪ್ಲೋಮಾ ವಿದ್ಯಾರ್ಥಿನಿ(Diploma Student)ಯನ್ನು ಕಂಡು ಡ್ರಾಪ್ ಕೊಡುವುದಾಗಿ ಪುಸಲಾಯಿಸಿದ್ದಾನೆ. ಬಾಲಕಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡ ಆತ, ಹಾಸನದ 80 ಅಡಿ ರಸ್ತೆಯ ಸಮೀಪವಿರುವ ನಿರ್ಜನ ಪ್ರದೇಶದ ಗದ್ದೆ ಹಳ್ಳವೊಂದಕ್ಕೆ ಬಲವಂತವಾಗಿ ಕರೆದೊಯ್ದಿದ್ದಾನೆ. ಅಲ್ಲಿ ಬಾಲಕಿಯ ಮೇಲೆ ಅತ್ಯಂತ ಕ್ರೂರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಪೈಶಾಚಿಕ ಕೃತ್ಯ ಎಸಗಿದ ನಂತರ ಆರೋಪಿ ಸಾಗರ್(Sagar), ಬಾಲಕಿಯನ್ನು ಪುನಃ ಬೈಕ್‌ನಲ್ಲಿ ಕರೆದುಕೊಂಡು ಬರುತ್ತಿದ್ದ. ಈ ವೇಳೆ ತೀವ್ರ ಆಘಾತಕ್ಕೊಳಗಾಗಿದ್ದ ಬಾಲಕಿ ತನಗಾದ ಅನ್ಯಾಯದ ವಿರುದ್ಧ ಮತ್ತು ಹೆದರಿಕೆಯಿಂದ ರಸ್ತೆಯಲ್ಲೇ ಜೋರಾಗಿ ಕಿರುಚಾಡಿದ್ದಾಳೆ. ಬಾಲಕಿಯ ಕಿರುಚಾಟವನ್ನು ಕೇಳಿ ಅಲರ್ಟ್ ಆದ ಸ್ಥಳೀಯ ಸಾರ್ವಜನಿಕರು ತಕ್ಷಣವೇ ಬೈಕನ್ನು ತಡೆದು ಬಾಲಕಿಯನ್ನು ಕಿರಾತಕನಿಂದ ರಕ್ಷಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹಾಸನದ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದಂತೆಯೇ ಇಲಾಖೆ ತೀವ್ರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಹಾಸನ ಮಹಿಳಾ ಠಾಣೆಯ ಪಿಎಸ್ಐ ಮಧು ಹಾಗೂ ಅವರ ನೇತೃತ್ವದ ವಿಶೇಷ ಪೊಲೀಸ್ ತಂಡವು ತಕ್ಷಣವೇ ಕಾರ್ಯಾಚರಣೆಗೆ ಇಳಿದು, ಕೃತ್ಯ ಎಸಗಿದ ಕೆಲವೇ ಗಂಟೆಗಳಲ್ಲಿ ಕಾಮುಕ ಸಾಗರ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಸದ್ಯ ಸಂತ್ರಸ್ತೆ ತೀವ್ರ ಆಘಾತದಲ್ಲಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply