ಮೈಸೂರು: ನೀವು ಆನೆ ಶಿಬಿರಗಳಿಗೆ (Elephant Camps) ಭೇಟಿ ನೀಡಿ, ಗಜಪಡೆಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಅಥವಾ ಅವುಗಳನ್ನು ಮುಟ್ಟಿ ಸಂಭ್ರಮಿಸುವ ಪ್ರವಾಸಿಗರಾ? ಹಾಗಿದ್ದರೆ ಇನ್ಮುಂದೆ ನಿಮ್ಮ ಈ ಆಸೆಗೆ ಬ್ರೇಕ್ ಬೀಳಲಿದೆ. ದುಬಾರೆ ಆನೆ ಶಿಬಿರದಲ್ಲಿ ನಡೆದ ಭೀಕರ ದುರಂತದ ನಂತರ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ರಾಜ್ಯದ ಎಲ್ಲಾ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಕಠಿಣ ‘ಲಕ್ಷ್ಮಣ ರೇಖೆ’ ಎಳೆದಿದೆ.
ಕಳೆದ ಮೇ ತಿಂಗಳಲ್ಲಿ ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ನಡೆದ ಆನೆಗಳ ಕಾದಾಟ ಹಾಗೂ ಪ್ರವಾಸಿ ಮಹಿಳೆಯೊಬ್ಬರ ಸಾವು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಇಂತಹ ಕರಾಳ ಘಟನೆಗಳು ಮರುಕಳಿಸಬಾರದು ಎಂಬ ದೃಢ ನಿರ್ಧಾರಕ್ಕೆ ಬಂದಿರುವ ಅರಣ್ಯ ಇಲಾಖೆ, ಈಗ 10 ಕಠಿಣ ಹೊಸ ಮಾರ್ಗಸೂಚಿಗಳನ್ನು (SOP) ಜಾರಿಗೆ ತಂದಿದೆ. ನಿಯಮ ಉಲ್ಲಂಘಿಸಿದರೆ ಭಾರಿ ದಂಡ ಹಾಗೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ಹೊಸ ರೂಲ್ಸ್‌ನಲ್ಲಿ ಏನೇನಿದೆ?
-
ತ್ರೀ-ಕಲರ್ ಝೋನ್ ಫಿಕ್ಸ್: ಶಿಬಿರಗಳನ್ನು ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಕೆಂಪು (ಆನೆಗಳು), ಕೇಸರಿ (ಸಿಬ್ಬಂದಿ) ಮತ್ತು ಹಸಿರು (ಪ್ರವಾಸಿಗರು). ಪ್ರವಾಸಿಗರು ಹಸಿರು ವಲಯ ಬಿಟ್ಟು ಬೇರೆಡೆ ಹೆಜ್ಜೆ ಇಡುವಂತಿಲ್ಲ.
-
10 ಮೀಟರ್ ಅಂತರ ಕಡ್ಡಾಯ: ಆನೆ ಹಾಗೂ ಪ್ರವಾಸಿಗರ ನಡುವೆ ಕನಿಷ್ಠ 10 ಮೀಟರ್ ಅಂತರವಿರಬೇಕು. ಯಾರೂ ಡಬಲ್ ಬ್ಯಾರಿಕೇಡ್ ದಾಟುವಂತಿಲ್ಲ.
-
ಸೆಲ್ಫಿ ಹಾಗೂ ಮುಟ್ಟುವುದು ಬ್ಯಾನ್: ಆನೆಗಳ ಹತ್ತಿರ ಹೋಗಿ ಸೆಲ್ಫಿ ತೆಗೆದುಕೊಳ್ಳುವುದು ಮತ್ತು ಅವುಗಳ ಮೈ ಮುಟ್ಟುವುದು ಇನ್ನು ಮುಂದೆ ಸಂಪೂರ್ಣ ನಿಷೇಧಿಸಲಾಗಿದೆ.
-
ದೂರದಿಂದಷ್ಟೇ ಸ್ನಾನ ವೀಕ್ಷಣೆ: ಕಾವೇರಿ ನದಿ ಸೇರಿದಂತೆ ಬೇರೆಡೆ ಆನೆಗಳಿಗೆ ಸ್ನಾನ ಮಾಡಿಸುವಾಗ ಹತ್ತಿರ ಹೋಗುವಂತಿಲ್ಲ. ಕೇವಲ ದೂರದ ಗ್ಯಾಲರಿಯಿಂದ ಮಾತ್ರ ವೀಕ್ಷಿಸಬೇಕು.
-
ಹೈಟೆಕ್ ಸಿಸಿಟಿವಿ ಕಣ್ಗಾವಲು: ಪ್ರತಿಯೊಂದು ಚಲನವಲನವನ್ನು ಕಂಟ್ರೋಲ್ ರೂಮ್‌ನಿಂದ ಅಧಿಕಾರಿಗಳು ಹೈಟೆಕ್ ಸಿಸಿಟಿವಿ ಕ್ಯಾಮೆರಾಗಳ ಮೂಲಕ ವಾಚ್ ಮಾಡಲಿದ್ದಾರೆ.
ಸೌಮ್ಯ ಸ್ವಭಾವದ ಆನೆಗಳು ಮಾತ್ರ ಸಾರ್ವಜನಿಕ ವೀಕ್ಷಣೆಗೆ ಲಭ್ಯ:
ಹೊಸ ನಿಯಮದ ಪ್ರಕಾರ, ಕೇವಲ ಶಾಂತ ಸ್ವಭಾವದ (ಗ್ರೀನ್ ಕೆಟಗರಿ) ಆನೆಗಳನ್ನು ಮಾತ್ರ ಪ್ರವಾಸಿಗರ ಮುಂದೆ ತರಲಾಗುತ್ತದೆ. ಮದವೇರಿದ, ಗಾಯಗೊಂಡ ಅಥವಾ ಮಾನಸಿಕ ಒತ್ತಡದಲ್ಲಿರುವ ಆನೆಗಳನ್ನು ಸಾರ್ವಜನಿಕ ವೀಕ್ಷಣೆಯಿಂದ ದೂರ ಇಡಲಾಗುತ್ತದೆ. ಅಷ್ಟೇ ಅಲ್ಲದೆ, 6 ತಿಂಗಳ ಒಳಗಿನ ಪುಟ್ಟ ಮರಿಯನ್ನು ಹೊಂದಿರುವ ತಾಯಿ ಆನೆಗಳಿಗೂ ಪ್ರವಾಸಿಗರಿಂದ ಮುಕ್ತಿ ನೀಡಲಾಗಿದೆ.
ಅರಣ್ಯ ಇಲಾಖೆಯ ಈ ಹೊಸ ನಿಯಮಗಳು ಕಾಗದದ ಮೇಲೆ ಉಳಿಯುತ್ತವೆಯೇ ಅಥವಾ ಪ್ರವಾಸಿಗರ ಜೀವಕ್ಕೆ ನಿಜಕ್ಕೂ ಕವಚವಾಗುತ್ತವೆಯೇ ಎಂಬುದನ್ನು ಕಾಲವೇ ನಿರ್ಧರಿಸಬೇಕು. ಆದರೆ ಆನೆ ಶಿಬಿರಗಳಿಗೆ ಹೋಗುವ ಮುನ್ನ ಈ ನಿಯಮಗಳ ಬಗ್ಗೆ ಜಾಗರೂಕರಾಗಿರುವುದು ಅನಿವಾರ್ಯ.

Leave a Reply