ಇನ್ಮುಂದೆ ಎಲ್ಲಾ ಸರ್ಕಾರಿ ಅಧಿಕಾರಿಗಳು 10 ಗಂಟೆಯೊಳಗೆ ಕಚೇರಿಯಲ್ಲಿಬೇಕು: ನಿಯಮ ಮೀರಿದರೆ ತಕ್ಷಣವೇ ನೋಟಿಸ್!

ಬೆಂಗಳೂರು: ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ನಿಗದಿತ ಸಮಯಕ್ಕೆ ಆಗುತ್ತಿಲ್ಲ ಹಾಗೂ ಅಧಿಕಾರಿಗಳು ಕಚೇರಿಗೆ ಸರಿಯಾದ ಸಮಯಕ್ಕೆ ಬರುತ್ತಿಲ್ಲ ಎಂಬ ದೂರುಗಳಿಗೆ ಬ್ರೇಕ್ ಹಾಕಲು ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ಜೂನ್ 4ರ ಗುರುವಾರ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ನೀಡಿದ ಕಟ್ಟುನಿಟ್ಟಿನ ನಿರ್ದೇಶನದ ಬೆನ್ನಲ್ಲೇ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ (CS) ಶಾಲಿನಿ ರಜನೀಶ್ ಅವರು ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ಹಾಜರಾತಿಯನ್ನು ಕಡ್ಡಾಯಗೊಳಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ನೌಕರರ ಹಾಜರಾತಿಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲು ಇ-ಆಡಳಿತ ಇಲಾಖೆಯು ‘ಕರ್ತವ್ಯ’ (KAAMS) App ಸಿದ್ಧಪಡಿಸಿದೆ. ಈಗಾಗಲೇ ಹೆಚ್.ಆರ್.ಎಂ.ಎಸ್ (HRMS) ತಂತ್ರಾಂಶದಲ್ಲಿ ಲಭ್ಯವಿರುವ ರಾಜ್ಯದ ಎಲ್ಲಾ ನೌಕರರ ಮಾಹಿತಿಯನ್ನು ಇದರಲ್ಲಿ ಲಿಂಕ್ ಮಾಡಲಾಗಿದೆ. ಆದರೂ ಅನೇಕ ಸಿಬ್ಬಂದಿಗಳು ಈ ಆಪ್ ಬಳಸುತ್ತಿಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಇನ್ಮುಂದೆ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರೂ ಬೆಳಗ್ಗೆ 10 ಗಂಟೆಯೊಳಗೆ ಈ ಆಪ್‌ನಲ್ಲಿ ಕಡ್ಡಾಯವಾಗಿ ಚೆಕ್ ಇನ್ (Check In) ಹಾಗೂ ಕಚೇರಿ ಮುಗಿಯುವಾಗ ಚೆಕ್ ಔಟ್ (Check Out) ದಾಖಲಿಸಲೇಬೇಕು ಎಂದು ಆದೇಶಿಸಿದೆ.

ಈ ಹೊಸ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಇ-ಆಡಳಿತ ಇಲಾಖೆಯು ಅತ್ಯಾಧುನಿಕ AI (ಕೃತಕ ಬುದ್ಧಿಮತ್ತೆ) ತಂತ್ರಾಂಶವನ್ನು ಕಣಕ್ಕಿಳಿಸಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಯಾಗುತ್ತಿದ್ದಂತೆ ಯಾರ್ಯಾರು ಹಾಜರಾತಿ ದಾಖಲಿಸಿಲ್ಲವೋ, ಅಂತಹ ನೌಕರರ ಜಿಲ್ಲಾವಾರು ಹಾಗೂ ಕಚೇರಿವಾರು ಲಿಸ್ಟ್ ಅನ್ನು ಈ AI ಸಾಫ್ಟ್‌ವೇರ್ ಸ್ವಯಂಚಾಲಿತವಾಗಿ (Automated) ಸಿದ್ಧಪಡಿಸಲಿದೆ. ಈ ರೀತಿ ಜನರೇಟ್ ಆದ ವರದಿಯು ನೇರವಾಗಿ ಆಯಾ ಇಲಾಖೆಯ ಮುಖ್ಯಸ್ಥರ ವೈಯಕ್ತಿಕ ಲಾಗಿನ್ ಡ್ಯಾಶ್‌ ಬೋರ್ಡ್‌ಗೆ ರವಾನೆಯಾಗಲಿದೆ. ಇಲಾಖಾ ಮುಖ್ಯಸ್ಥರು ಪ್ರತಿದಿನ ಇದನ್ನು ಪರಿಶೀಲಿಸಿ, ತಡವಾಗಿ ಬಂದವರಿಗೆ ಅಥವಾ ಗೈರಾದವರಿಗೆ ತಕ್ಷಣವೇ ಶೋಕಾಸ್ ನೋಟಿಸ್ ನೀಡಲಿದ್ದಾರೆ.

ಕ್ಷೇತ್ರ ಭೇಟಿ ಅಥವಾ ಕಚೇರಿ ಕೆಲಸದ ನಿಮಿತ್ತ ಹೊರಗಡೆ ಪ್ರವಾಸದಲ್ಲಿರುವ ಅಧಿಕಾರಿಗಳಿಗೆ ಆ್ಯಪ್‌ನಲ್ಲಿ ವಿನಾಯಿತಿ ನೀಡಲಾಗಿದೆ. ಅಂತಹ ನೌಕರರು ಆ್ಯಪ್‌ನಲ್ಲಿ ಲಭ್ಯವಿರುವ ‘OOD Option’ ಆಯ್ಕೆ ಮಾಡಿಕೊಂಡು, ತಾವು ಪ್ರವಾಸದಲ್ಲಿರುವ ಉದ್ದೇಶವನ್ನು ನಮೂದಿಸಿ ಹಾಜರಾತಿ ಹಾಕಬಹುದು. ಆದರೆ, ಇದನ್ನು ಸಂಬಂಧಪಟ್ಟ ಮೇಲಾಧಿಕಾರಿಗಳು ಪರಿಶೀಲಿಸಿ ಧೃಡೀಕರಿಸುವುದು ಕಡ್ಡಾಯವಾಗಿದೆ.

ಈ ಹೊಸ ನಿಯಮವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಆ್ಯಪ್ ಬಳಕೆಯ ಹೆಚ್ಚಿನ ಮಾಹಿತಿಗಾಗಿ ನೌಕರರು ಯುಟ್ಯೂಬ್‌ನಲ್ಲಿ (YouTube) ಲಭ್ಯವಿರುವ ‘Kartavya (KAAMS) APP’ ವಿಡಿಯೋ ಗೈಡ್ ವೀಕ್ಷಿಸಬಹುದಾಗಿದೆ. ಸರ್ಕಾರದ ಈ ಹೈಟೆಕ್ ಆದೇಶದಿಂದಾಗಿ ವಿಧಾನಸೌಧ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಬೆಳಗ್ಗೆ 10 ಗಂಟೆಗೆ ಶಿಸ್ತಿನ ವಾತಾವರಣ ನಿರ್ಮಾಣವಾಗುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *