Judgement | ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದ ಮಾಜಿ ತಹಶೀಲ್ದಾರ್‌ಗೆ 4 ವರ್ಷ ಜೈಲು ಶಿಕ್ಷೆ!

ಕಲಬುರಗಿ: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಅಫಜಲಪುರದ ಮಾಜಿ ತಹಶೀಲ್ದಾರ್ ಶಶಿಕಲಾ ಪಾದಗಟ್ಟಿ ಅವರಿಗೆ ಕಲಬುರಗಿ ಜಿಲ್ಲಾ ನ್ಯಾಯಾಲಯವು 4 ವರ್ಷಗಳ ಜೈಲು ಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. 

2017 ರಲ್ಲಿ ಅಫಜಲಪುರ ತಾಲೂಕಿನ ಕರಜಗಿ ನಾಡ ಕಚೇರಿಯಲ್ಲಿ ಶಿವಲಿಂಗಯ್ಯ ಎಂಬುವವರ ಕೆಲಸ ಮಾಡಿಕೊಡಲು ಬರೋಬ್ಬರಿ 1 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು. ಈ ಭ್ರಷ್ಟಾಚಾರದ ಕುರಿತು ಸಾರ್ವಜನಿಕರು ಸಹ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಪ್ರಕರಣದ ಬೆನ್ನುಬಿದ್ದಿದ್ದ ಅಧಿಕಾರಿಗಳು ಪಕ್ಕಾ ಸಾಕ್ಷ್ಯಾಧಾರಗಳ ಸಮೇತ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಭ್ರಷ್ಟಾಚಾರ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಜೈಲು ಶಿಕ್ಷೆ ಪ್ರಕಟಿಸಿದೆ. 2017 ರ ಅವಧಿಯಲ್ಲಿ ಕಲಬುರಗಿ ಜಿಲ್ಲೆಯ ಅಫಜಲಪುರ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಶಿಕಲಾ ಪಾದಗಟ್ಟಿ ಅವರು ಪ್ರಸ್ತುತ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಲಂಚಗುಳಿತನದ ವಿರುದ್ಧ ನ್ಯಾಯಾಲಯ ನೀಡಿರುವ ಈ ಕಠಿಣ ತೀರ್ಪು ಭ್ರಷ್ಟ ಅಧಿಕಾರಿಗಳಿಗೆ ಸ್ಪಷ್ಟ ಎಚ್ಚರಿಕೆಯ ಗಂಟೆಯಾಗಿದ್ದು, ಲೋಕಾಯುಕ್ತದ ಈ ಯಶಸ್ವಿ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *