ರಸ್ತೆ ಅಪಘಾತ, ಅತಿ ವೇಗದ ಚಾಲನೆಯಲ್ಲಿ ಬೆಂಗಳೂರಿಗೆ ದೇಶದಲ್ಲೇ ಮೊದಲ ಸ್ಥಾನ!

ಹಂಚಿಕೊಳ್ಳಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ರಸ್ತೆ ಸುರಕ್ಷತೆಯಲ್ಲಿ ಮತ್ತೊಮ್ಮೆ ದೇಶದಲ್ಲೇ ಅತ್ಯಂತ ಆತಂಕಕಾರಿ ದಾಖಲೆ ಬರೆದಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿರುವ 2024ರ ರಸ್ತೆ ಅಪಘಾತಗಳ ಅಧಿಕೃತ ವರದಿಯ ಪ್ರಕಾರ, ಅತಿ ವೇಗದ (Over-speeding) ಚಾಲನೆಯಿಂದ ನಡೆಯುವ ರಸ್ತೆ ದುರಂತಗಳಲ್ಲಿ ಬೆಂಗಳೂರು ದೇಶದ ಪ್ರಮುಖ ನಗರಗಳ ಪೈಕಿ ಮೊದಲ ಸ್ಥಾನ ಪಡೆದಿದೆ. ಇನ್ನು ಒಟ್ಟಾರೆ ಸಂಭವಿಸಿದ ಅಪಘಾತಗಳ ಸಂಖ್ಯೆಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಕಳೆದ 2023ಕ್ಕೆ ಹೋಲಿಸಿದರೆ ಅಪಘಾತಗಳ ಸಂಖ್ಯೆಯಲ್ಲಿ ಶೇ 4.1 ರಷ್ಟು ಕೊಂಚ ಇಳಿಕೆ ಕಂಡುಬಂದಿದೆಯಾದರೂ, 2020ಕ್ಕೆ ಹೋಲಿಸಿದರೆ ಕಳೆದ ನಾಲ್ಕು ವರ್ಷಗಳಲ್ಲಿ ಅಪಘಾತಗಳ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.

ಸಾಮಾನ್ಯವಾಗಿ ತಿರುವುಗಳು ಅಥವಾ ಕೆಟ್ಟ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸುವುದು ಸಹಜ ಎಂಬ ನಂಬಿಕೆಯನ್ನು ಈ ವರದಿ ಸುಳ್ಳಾಗಿಸಿದೆ. ಬೆಂಗಳೂರಿನಲ್ಲಿ ಅತ್ಯಂತ ಸುಸ್ಥಿತಿಯಲ್ಲಿರುವ ನೇರ ರಸ್ತೆಗಳಲ್ಲೇ ಅತಿ ಹೆಚ್ಚು ಅಪಘಾತಗಳು ಸಂಭವಿಸಿವೆ. ನಗರದ ನೇರ ರಸ್ತೆಗಳಲ್ಲಿ ಬರೋಬ್ಬರಿ 4,161 ಅಪಘಾತಗಳು ಸಂಭವಿಸಿದ್ದು, ಇವುಗಳಲ್ಲಿ 766 ಜನರು ಸಾವನ್ನಪ್ಪಿದ್ದಾರೆ. ಇದಕ್ಕೆ ವಿರುದ್ಧವಾಗಿ ತಿರುವು ರಸ್ತೆಗಳಲ್ಲಿ 415 ಅಪಘಾತಗಳು ನಡೆದು 87 ಮಂದಿ ಮೃತಪಟ್ಟಿದ್ದಾರೆ. ಇನ್ನು ಆಶ್ಚರ್ಯಕರವಾಗಿ ಕಳಪೆ ರಸ್ತೆ ಗುಂಡಿಗಳಿಂದಾಗಿ ಕೇವಲ ಎರಡು ಅಪಘಾತಗಳು ವರದಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಹವಾಮಾನ ಸಂಪೂರ್ಣ ಸ್ವಚ್ಛವಾಗಿದ್ದ ಹಾಗೂ ಬಿಸಿಲಿದ್ದ ಸಂದರ್ಭದಲ್ಲೇ ಬಹುತೇಕ ಅಪಘಾತಗಳು ನಡೆದಿರುವುದು ವಾಹನ ಸವಾರರ ಬೇಜವಾಬ್ದಾರಿತನಕ್ಕೆ ಕನ್ನಡಿ ಹಿಡಿದಿದೆ.

ನಗರದಲ್ಲಿ ಸಂಭವಿಸಿದ ಒಟ್ಟು ರಸ್ತೆ ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳದ್ದೇ ಸಿಂಹಪಾಲಾಗಿದೆ. ಬೈಕ್ ಅಪಘಾತಗಳಿಗೆ ಸಂಬಂಧಿಸಿದಂತೆ 2,175 ಪ್ರಕರಣಗಳು ದಾಖಲಾಗಿದ್ದು, 467 ಸವಾರರು ಜೀವ ಕಳೆದುಕೊಂಡಿದ್ದಾರೆ. ಇನ್ನು ಪಾದಚಾರಿಗಳಿಗೆ ಸಂಬಂಧಿಸಿದಂತೆ 216 ಅಪಘಾತಗಳು ಸಂಭವಿಸಿದ್ದು, ಬಲಿಯಾದ ಪಾದಚಾರಿಗಳ ಸಂಖ್ಯೆ ಬರೋಬ್ಬರಿ 241 ಆಗಿದೆ. ಅತಿ ವೇಗದಿಂದಾಗಿ ನಗರದಲ್ಲಿ ಒಟ್ಟು 4,290 ಅಪಘಾತಗಳು ಸಂಭವಿಸಿ 776 ಜನರು ಬಲಿಯಾಗಿದ್ದರೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದರಿಂದ (Drunken driving) 129 ಅಪಘಾತಗಳು ಸಂಭವಿಸಿದ್ದು, 45 ಜನರು ಮೃತಪಟ್ಟಿದ್ದಾರೆ ಎಂದು ವರದಿ ಸಾರಿದೆ.

Leave a Reply

Your email address will not be published. Required fields are marked *

Advertisement


This will close in 3 seconds