ಮಂಡ್ಯ: ಸಕ್ಕರೆ ನಾಡು ಮಂಡ್ಯ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ (Cauvery basin) ಅನ್ನದಾತನಿಗೆ ಈ ಬಾರಿಯ ಮುಂಗಾರು ಆರಂಭದಲ್ಲೇ ಬಿಗ್ ಶಾಕ್ ನೀಡಿದೆ. ಮಳೆ ಸಂಪೂರ್ಣವಾಗಿ ಕೈಕೊಟ್ಟ ಬೆನ್ನಲ್ಲೇ, ಈಗ ಬರದ ಆತಂಕದಲ್ಲಿರುವ ಮಂಡ್ಯ ಮತ್ತು ಮೈಸೂರು ಜಿಲ್ಲೆಯ ರೈತರ (Mandya, Mysuru Farmers) ಗಾಯದ ಮೇಲೆ ಉಪ್ಪು ಸವರುವಂತಹ ಮತ್ತೊಂದು ಕಠಿಣ ನಿರ್ಧಾರವನ್ನು ಜಿಲ್ಲಾಡಳಿತ ಪ್ರಕಟಿಸಿದೆ.
ಮಂಡ್ಯ, ಮೈಸೂರು, ಕೊಡಗು ಭಾಗದ ಕೃಷಿ ಭೂಮಿಗೆ ಆಧಾರವಾಗಿರುವ ಹಾಗೂ ಬೆಂಗಳೂರಿನ ಕುಡಿಯುವ ನೀರಿನ ದಾಹ ನೀಗಿಸುವ ಕೃಷ್ಣರಾಜಸಾಗರ ಜಲಾಶಯದಲ್ಲಿ (KRS Reservoir) ಈಗ ಜೀವಕಳೆ ಉಡುಗಿದೆ. ಪ್ರಸ್ತುತ ಕೆಆರ್‌ಎಸ್ ಅಣೆಕಟ್ಟಿನಲ್ಲಿ(KRS Dam) ಕೇವಲ 11 ಟಿಎಂಸಿ ನೀರು ಮಾತ್ರ ಉಳಿದುಕೊಂಡಿದೆ. ಇದರಲ್ಲಿ 5 ಟಿಎಂಸಿ ಡೆಡ್ ಸ್ಟೋರೆಜ್ (ಬಳಕೆಗೆ ಬಾರದ ನೀರು) ಆಗಿರುವುದರಿಂದ, ಪ್ರಸ್ತುತ ಬಳಕೆಗೆ ಲಭ್ಯವಿರುವುದು ಕೇವಲ 6 ಟಿಎಂಸಿ ನೀರು ಮಾತ್ರ! ಈ ಹಿನ್ನೆಲೆಯಲ್ಲಿ ಜಲಕ್ಷಾಮ ಎದುರಾಗದಂತೆ ತಡೆಯಲು ಎಚ್ಚೆತ್ತಿರುವ ಜಿಲ್ಲಾಡಳಿತವು ಕೇವಲ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿದೆ. ಮುಂದಿನ 3 ತಿಂಗಳುಗಳ ಕಾಲ ಕೇವಲ ಕುಡಿಯುವ ನೀರಿನ ನಿರ್ವಹಣೆ ಮಾಡಲು ನಿರ್ಧರಿಸಲಾಗಿದ್ದು, ರೈತರ ಬೆಳೆಗಳಿಗೆ ನಾಲೆಗಳ ಮೂಲಕ ಕಾವೇರಿ ನೀರು ಹರಿಸುವುದು ಬಹುತೇಕ ಅನುಮಾನ ಎನ್ನಲಾಗಿದೆ.
ಈ ಭಾಗದ ಮೂರು ಜಿಲ್ಲೆಗಳ ರೈತರು ತಮ್ಮ ಬದುಕಿಗಾಗಿ ಸಂಪೂರ್ಣವಾಗಿ ಕಾವೇರಿ ನದಿ ನೀರನ್ನೇ ನೆಚ್ಚಿಕೊಂಡಿದ್ದಾರೆ. ಈಗ ಮುಂಗಾರು ಆರಂಭದಲ್ಲೇ ನಿರಾಸೆ ಮೂಡಿಸಿರುವುದರಿಂದ ಮತ್ತು ನಾಲೆಗಳಿಗೆ ನೀರು ಹರಿಯುವುದು ಬಂದ್ ಆಗುತ್ತಿರುವುದರಿಂದ ಮಂಡ್ಯ, ಮೈಸೂರು ಭಾಗದ ಕೃಷಿ ಭೂಮಿಗಳು ಹಸಿರನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಅತ್ತ ವರುಣದೇವನ ಕೃಪೆಯೂ ಇಲ್ಲದೆ, ಇತ್ತ ಡ್ಯಾಂನಿಂದಲೂ ನೀರು ಸಿಗದೆ ರೈತರು ಕಷ್ಟಪಟ್ಟು ಬೆಳೆದು ನಿಲ್ಲಿಸಿರುವ ಕಬ್ಬಿನ ಬೆಳೆ ಕಣ್ಣೆದುರೇ ಒಣಗತೊಡಗಿದೆ. ಸದ್ಯಕ್ಕೆ ಮಳೆರಾಯ ಕರುಣೆ ತೋರಿ ಕೆಆರ್‌ಎಸ್ ಜಲಾಶಯ ಭರ್ತಿಯಾಗದಿದ್ದರೆ ರೈತರ ಬದುಕು ಸಂಪೂರ್ಣ ಚಿಂತಾಜನಕವಾಗಲಿದ್ದು, ಅನ್ನದಾತರು ಈಗ ಮುಗಿಲ ಕಡೆ ಮುಖ ಮಾಡಿ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.

Leave a Reply