ಹಾಸನ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ (Cross Voting) ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ತಮ್ಮ ಮೇಲಿನ ಕಳಂಕ ಮುಖ ತೊಳೆದುಕೊಳ್ಳಲು ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ (BJP) ಶಾಸಕ ಹೆಚ್.ಕೆ. ಸುರೇಶ್ ಅವರು ಆಣೆ-ಪ್ರಮಾಣ ಮಾಡಲು ಧರ್ಮಸ್ಥಳಕ್ಕೆ [Dharmasthala Pilgrimage] ಪ್ರಯಾಣ ಬೆಳೆಸಿದ್ದಾರೆ. ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಸಾಬೀತುಪಡಿಸಲು ಶ್ರೀ ಮಂಜುನಾಥಸ್ವಾಮಿಯ ಸನ್ನಿಧಿಯಲ್ಲಿ ಆಣೆ ಮಾಡಲು ನೂರಾರು ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರ ಜೊತೆ ಶಾಸಕರು ತೆರಳಿದ್ದಾರೆ.
ಧರ್ಮಸ್ಥಳಕ್ಕೆ ಹೊರಡುವ ಮುನ್ನ ಶಾಸಕ ಸುರೇಶ್ ಅವರು ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ತದನಂತರ, ದೇವಾಲಯದ ಆವರಣದಲ್ಲಿರುವ ಪವಿತ್ರ ಬಲಿ ಕಲ್ಲಿನ ಮೇಲೆ ಕೈಯಿಟ್ಟು, “ನಾನು ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಅಡ್ಡ ಮತದಾನ ಮಾಡಿಲ್ಲ. ಪಕ್ಷಕ್ಕೆ ದ್ರೋಹ ಬಗೆದಿಲ್ಲ” ಎಂದು ಕರಾರುವಾಕ್ಕಾಗಿ ಆಣೆ ಮಾಡಿದರು. ಬಳಿಕ ಅಲ್ಲೇ ಕರ್ಪೂರ ಹಚ್ಚಿ ಧರ್ಮಸ್ಥಳದತ್ತ ತಮ್ಮ ಪಯಣ ಮುಂದುವರಿಸಿದರು.
ತಮ್ಮ ವಿರುದ್ಧ ಅಡ್ಡ ಮತದಾನದ ದೂರು ಹಾಗೂ ಆರೋಪಗಳು ಕೇಳಿಬಂದ ತಕ್ಷಣವೇ ಪ್ರತಿಕ್ರಯಿಸಿದ್ದ ಶಾಸಕ ಸುರೇಶ್, ತಾವು ನಿರಪರಾಧಿಯಾಗಿದ್ದು ಧರ್ಮಸ್ಥಳದ ಮಂಜುನಾಥಸ್ವಾಮಿ ಮೇಲೆ ಆಣೆ ಮಾಡುವುದಾಗಿ ಸಾರ್ವಜನಿಕವಾಗಿ ಸವಾಲು ಹಾಕಿದ್ದರು. ಅದರಂತೆ, ಇಂದು ತಮ್ಮ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಧರ್ಮಸ್ಥಳದಲ್ಲಿ ಸತ್ಯಪ್ರಮಾಣ ಮಾಡಲಿದ್ದಾರೆ. ಈ ರಾಜಕೀಯ ಹೈಡ್ರಾಮಾ ಹಾಸನ ಜಿಲ್ಲಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.

Leave a Reply