ಬಸ್‌ ಪ್ರಯಾಣಿಕರಿಗೆ ದರ ಏರಿಕೆ ಶಾಕ್? KSRTC ಶೇ.33, BMTC ಶೇ.44 ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ!

ಬೆಂಗಳೂರು: ರಾಜ್ಯದ ಸಾಮಾನ್ಯ ಜನರಿಗೆ ಸರ್ಕಾರ ಮತ್ತೊಂದು ಬೆಲೆ ಏರಿಕೆ ಶಾಕ್ ನೀಡಲು ಮುಂದಾಗಿದೆ. ಡೀಸೆಲ್ ದರ ಏರಿಕೆ ಹಾಗೂ ಸಾರಿಗೆ ನಿಗಮಗಳ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ ಟಿಕೆಟ್ ದರ ಹೆಚ್ಚಳ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳ (Guarantee Schemes) ನಡುವೆಯೇ ಈ ದರ ಏರಿಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ ಎನಿಸಿದೆ.

ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯು ಈಗಾಗಲೇ ಸರ್ಕಾರದ ಮುಂದೆ ಅಧಿಕೃತ ಪ್ರಸ್ತಾವನೆ ಇಟ್ಟಿದೆ.

  • ಬಿಎಂಟಿಸಿ (BMTC): ಶೇಕಡಾ 44% ರಷ್ಟು ಟಿಕೆಟ್ ದರ ಏರಿಕೆಗೆ ಬೇಡಿಕೆ ಇಟ್ಟಿದೆ.

  • ಕೆಎಸ್‌ಆರ್‌ಟಿಸಿ (KSRTC): ಶೇಕಡಾ 33% ರಷ್ಟು ದರ ಹೆಚ್ಚಳಕ್ಕೆ ಅನುಮತಿ ಕೋರಿದೆ.

KSRTC ಮತ್ತು BMTC ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳು ದರ ಏರಿಕೆ ಮಾಡಲೇಬೇಕು ಎಂದು ಬಿಗಿ ಪಟ್ಟು ಹಿಡಿದಿದ್ದು, ಸರ್ಕಾರದ ಒಪ್ಪಿಗೆ ಸಿಕ್ಕ ತಕ್ಷಣ ಹೊಸ ದರ ಜಾರಿಗೆ ಬರುವ ಸಾಧ್ಯತೆ ಇದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆ (Shakti Scheme) ಜಾರಿಯಾದ ಬಳಿಕ ಸಾರಿಗೆ ನಿಗಮಗಳ ಮೇಲಿನ ಆರ್ಥಿಕ ಒತ್ತಡ ಹೆಚ್ಚಾಗಿದೆ. ಇದರೊಂದಿಗೆ ನಿರಂತರ ಡೀಸೆಲ್ ದರ ಏರಿಕೆ ಮತ್ತು ಸಾರಿಗೆ ನೌಕರರ ಸಂಬಳ ಹೆಚ್ಚಳದಂತಹ ಖರ್ಚುಗಳು ನಿಗಮಗಳಿಗೆ ಭಾರೀ ಹೊರೆಯಾಗಿ ಪರಿಣಮಿಸಿವೆ. ಈ ಹಂತದಲ್ಲಿ ಟಿಕೆಟ್ ದರ ಹೆಚ್ಚಿಸದಿದ್ದರೆ ನಿಗಮಗಳು ಸಂಪೂರ್ಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿವೆ, ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಅಧಿಕಾರಿಗಳು ವಾದಿಸುತ್ತಿದ್ದಾರೆ.

ಸಿಎಂ ಡಿ.ಕೆ. ಶಿವಕುಮಾರ್ ಏನಂತಾರೆ?

ಸಾರಿಗೆ ನಿಗಮಗಳ ಈ ಪ್ರಸ್ತಾವನೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ಖಾಸಗಿ ಹಾಗೂ ನಿಗಮದ ಡಿಪೋಗಳ ನಡುವಿನ ಡೀಸೆಲ್ ಬೆಲೆ ವ್ಯತ್ಯಾಸ ಸುಮಾರು 40 ರೂಪಾಯಿಗಳಷ್ಟಿದೆ. ಇದನ್ನು ನೋಡಿ ನನಗೂ ಗಾಬರಿಯಾಯಿತು” ಎಂದಿದ್ದಾರೆ.

“ಹಿಂದೆ ಡೀಸೆಲ್ ಬೆಲೆ ಹೆಚ್ಚಾದಾಗ ಟಿಕೆಟ್ ದರ ಹೆಚ್ಚಳ ಮಾಡಬೇಕೆಂಬ ತೀರ್ಮಾನವಿತ್ತು. ಆದರೆ ಇದರ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ, ಇತ್ತ ಕೆಎಸ್‌ಆರ್‌ಟಿಸಿಯೂ ಉಳಿಬೇಕು, ಅತ್ತ ಜನರಿಗೂ ತೊಂದರೆಯಾಗಬಾರದು—ಆ ರೀತಿಯ ಮಧ್ಯಮ ಮಾರ್ಗದ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *