ಬೀದರ್ ಜಿಲ್ಲೆಯ ಮಾಳಚಾಪೂರ ಗ್ರಾಮದಲ್ಲಿ ಜಮೀನಿನಲ್ಲಿ ಕಳೆ ಕೀಳುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಮಹಿಳೆಯೊಬ್ಬರು ಮೃ*ತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ. ಮೃ*ತ ಮಹಿಳೆಯನ್ನು 45 ವರ್ಷದ ತುಳಷಮ್ಮ ಎಂದು ಗುರುತಿಸಲಾಗಿದೆ.
ಇವರು ಗ್ರಾಮದ ಬೇರೊಬ್ಬರ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ವಿದ್ಯುತ್ ಕಂಬದಿಂದ ಕಳಚಿ ನೆಲಕ್ಕೆ ಉರುಳಿದ್ದ ಜೀವಂತ ವಿದ್ಯುತ್ ತಂತಿಯನ್ನು ಗಮನಿಸದ ಅವರು, ಕಳೆ ತೆಗೆಯುವಾಗ ಆಕಸ್ಮಿಕವಾಗಿ ಸ್ಪರ್ಶಿಸಿದ್ದಾರೆ. ಪರಿಣಾಮ ತೀವ್ರವಾಗಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಮೃತ ತುಳಷಮ್ಮ ಅವರ ಮಕ್ಕಳು ಈ ಹಿಂದೆ ತಂದೆಯನ್ನು ಕಳೆದುಕೊಂಡಿದ್ದರು. ಇದೀಗ ಆಧಾರವಾಗಿದ್ದ ತಾಯಿಯೂ ವಿದ್ಯುತ್ ಅವಘಡಕ್ಕೆ ಬಲಿಯಾಗಿದ್ದು, ಮೂವರು ಮಕ್ಕಳು ತಬ್ಬಲಿಗಳಾಗಿದ್ದಾರೆ. ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಮೃತದೇಹವನ್ನು ಇರಿಸಲಾಗಿದ್ದು, ಮಕ್ಕಳ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಬಡ ಕುಟುಂಬದ ದಿಕ್ಕಾಗಿದ್ದ ಮಹಿಳೆಯ ಸಾವಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕುಟುಂಬಸ್ಥರು ಸಂಬಂಧಪಟ್ಟ ಅಧಿಕಾರಿಗಳನ್ನು ತೀವ್ರವಾಗಿ ಆಗ್ರಹಿಸಿದ್ದಾರೆ. ಈ ದುರಂತ ಘಟನೆಯು ಭಾಲ್ಕಿ ತಾಲೂಕಿನ ಧನ್ನೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply