ಬೆಂಗಳೂರಿನಲ್ಲಿ ವಾರಗಟ್ಟಲೆ ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಹಾಗೆಯೇ ಬಿಟ್ಟು ಹೋಗುವ ವಾಹನ ಸವಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬಿಗ್ ಶಾಕ್ ನೀಡಿದೆ. ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯ ಯಶಸ್ಸಿನ ಬೆನ್ನಲ್ಲೇ, ನಾಳೆಯಿಂದ ನಗರಾದ್ಯಂತ ಅನಾಥ ವಾಹನಗಳ ತೆರವು ಅಭಿಯಾನವನ್ನು ಭರದಿಂದ ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಸ್ತೆಯಲ್ಲಿ ವಾರಗಟ್ಟಲೆ ವಾಹನಗಳನ್ನು ನಿಲ್ಲಿಸುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿ ಟ್ರಾಫಿಕ್ ಸಮಸ್ಯೆ ಸೃಷ್ಟಿಯಾಗುತ್ತಿದ್ದು, ಇದನ್ನು ತಪ್ಪಿಸಲು ಜಿಬಿಎ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಲಿದ್ದಾರೆ.
1500ಕ್ಕೂ ಹೆಚ್ಚು ವಾಹನಗಳ ಪತ್ತೆ, ವೀಲ್ ಕ್ಲಾಂಪ್ ಅಳವಡಿಕೆ
ನಗರದ ವಿವಿಧ ರಸ್ತೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಈಗಾಗಲೇ 1500ಕ್ಕೂ ಹೆಚ್ಚು ವಾರಸುದಾರರಿಲ್ಲದ ವಾಹನಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಗುರುತಿಸಲಾದ ಇಂತಹ ವಾಹನಗಳ ಚಕ್ರಗಳಿಗೆ ವೀಲ್ ಕ್ಲಾಂಪ್ ಅಳವಡಿಸಿ, ವಾಹನ ತೆರವುಗೊಳಿಸಲು ಮಾಲೀಕರಿಗೆ 7 ದಿನಗಳ ಕಾಲಾವಕಾಶದ ನೋಟಿಸ್ ಅಂಟಿಸಲಾಗುತ್ತದೆ. ನೋಟಿಸ್ ನೀಡಿದ ಬಳಿಕವೂ ನಿಗದಿತ ಸಮಯದೊಳಗೆ ವಾಹನವನ್ನು ತೆರವು ಮಾಡದಿದ್ದರೆ, ಆ ವಾಹನವನ್ನು ನಿರ್ದಾಕ್ಷಿಣ್ಯವಾಗಿ ಜಪ್ತಿ ಮಾಡಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಿಯಮಾನುಸಾರ ಬಹಿರಂಗ ಹರಾಜು, ಜಿಬಿಎ ಆಯುಕ್ತರ ಖಡಕ್ ಎಚ್ಚರಿಕೆ
ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿರುವ ಮಾಲೀಕರು ತಕ್ಷಣವೇ ತಮ್ಮ ವಾಹನಗಳನ್ನು ಸ್ವಂತ ಜಾಗಕ್ಕೆ ಸ್ಥಳಾಂತರಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಒಂದು ವೇಳೆ ಸೂಚನೆಯನ್ನು ನಿರ್ಲಕ್ಷಿಸಿ ವಾಹನ ಸ್ಥಳಾಂತರ ಮಾಡದಿದ್ದರೆ, ಜಪ್ತಿ ಮಾಡಲಾದ ವಾಹನಗಳನ್ನು ನಿಯಮಾನುಸಾರವಾಗಿ ಬಹಿರಂಗ ಹರಾಜು ಹಾಕಲು ಜಿಬಿಎ ಸಂಪೂರ್ಣ ಸಿದ್ಧತೆ ನಡೆಸಿದೆ. ಈ ಕುರಿತು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರರಾವ್ ಅವರು ಸಾರ್ವಜನಿಕರಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ಪಾರ್ಕಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

Leave a Reply