Krishan ನದಿ ತೀರದಲ್ಲಿ ಕುಡಿಯುವ ನೀರಿನ ಹಾಹಾಕಾರ; ಮಹಾರಾಷ್ಟ್ರ CM ಜೊತೆ ನಾಳೆ ರಾಜ್ಯದ ಮುಖ್ಯಮಂತ್ರಿ ಚರ್ಚೆ ಸಾಧ್ಯತೆ

ಬೆಳಗಾವಿ: ಜಿಲ್ಲೆಯ ಕೃಷ್ಣಾ ನದಿ ತೀರದ ತಾಲೂಕುಗಳಲ್ಲಿ ದಿನೇದಿನೇ ಕುಡಿಯುವ ನೀರಿನ ಪರಿಸ್ಥಿತಿ ತೀವ್ರವಾಗಿ ಬಿಗಡಾಯಿಸುತ್ತಿದೆ. ಬತ್ತುತ್ತಿರುವ ನದಿಗಳಿಂದಾಗಿ ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಈ ಗಂಭೀರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಜೊತೆಗೆ ಕರ್ನಾಟಕದ ಮುಖ್ಯಮಂತ್ರಿಗಳು ಜೂನ್ 20 ರಂದು (ನಾಳೆ) ಮಾತುಕತೆ ನಡೆಸುವ ಸಾಧ್ಯತೆಯಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದ್ದಾರೆ.

2 ಟಿಎಂಸಿ ನೀರಿಗಾಗಿ ಮಹಾರಾಷ್ಟ್ರಕ್ಕೆ ಮನವಿ

ಬೇಸಿಗೆಯ ತಾಪ ಹಾಗೂ ಮಳೆಯ ಅಭಾವದಿಂದಾಗಿ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಬಹುತೇಕ ಕ್ಷೀಣಿಸಿದೆ. ಬೆಳಗಾವಿ ಜಿಲ್ಲೆಯ ಪ್ರಮುಖ ತಾಲೂಕುಗಳಾದ ಚಿಕ್ಕೋಡಿ, ರಾಯಬಾಗ, ಅಥಣಿ ಹಾಗೂ ಕಾಗವಾಡ ಭಾಗದ ಜನರಿಗೆ ಕುಡಿಯುವ ನೀರಿನ ಪ್ರಮುಖ ಆಶ್ರಯವಾಗಿರುವ ಹಿಪ್ಪರಗಿ ಜಲಾಶಯದಲ್ಲಿ ಪ್ರಸ್ತುತ ಕೇವಲ 0.08 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಈ ಕಠಿಣ ಪರಿಸ್ಥಿತಿಯನ್ನು ನಿಭಾಯಿಸಲು ತಕ್ಷಣವೇ ಮಹಾರಾಷ್ಟ್ರದ ಜಲಾಶಯಗಳಿಂದ ಕನಿಷ್ಠ 2 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರದ ಮೂಲಕ ಮತ್ತೊಮ್ಮೆ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹಿಡಕಲ್, ಮಲಪ್ರಭಾದಲ್ಲಿ ಸದ್ಯಕ್ಕಿಲ್ಲ ಆತಂಕ

ಕೃಷ್ಣಾ ನದಿ ತೀರದಲ್ಲಿ ನೀರಿನ ಹಾಹಾಕಾರವಿದ್ದರೂ, ಜಿಲ್ಲೆಯ ಇತರ ಪ್ರಮುಖ ಜಲಾಶಯಗಳಾದ ಹಿಡಕಲ್ ಮತ್ತು ಮಲಪ್ರಭಾ ಡ್ಯಾಂಗಳಲ್ಲಿ ಸದ್ಯಕ್ಕೆ ಕುಡಿಯುವ ನೀರಿಗೆ ಸಾಕಾಗುವಷ್ಟು ನೀರಿನ ಸಂಗ್ರಹವಿದೆ. ಹೀಗಾಗಿ ಈ ಜಲಾಶಯಗಳನ್ನೇ ಅವಲಂಬಿಸಿರುವ ಪ್ರದೇಶಗಳಲ್ಲಿ ಜುಲೈ 20 ರವರೆಗೆ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಅಭಯ ನೀಡಿದ್ದಾರೆ.

ಮುಂಗಾರು ಕೊರತೆ: ಕುಂಠಿತಗೊಂಡ ಕೃಷಿ ಚಟುವಟಿಕೆ

ಇನ್ನೊಂದೆಡೆ, ಮಳೆಯ ತೀವ್ರ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳ ಮೇಲೂ ಭಾರಿ ಹೊಡೆತ ಬಿದ್ದಿದೆ. ವಾಡಿಕೆಯಂತೆ ಜೂನ್ ತಿಂಗಳಿನಲ್ಲಿ ಭರದಿಂದ ಸಾಗಬೇಕಿದ್ದ ಬಿತ್ತನೆ ಕಾರ್ಯ ಸಂಪೂರ್ಣವಾಗಿ ಕುಂಠಿತಗೊಂಡಿದ್ದು, ಇದುವರೆಗೆ ಕೇವಲ ಶೇಕಡಾ 40 ರಿಂದ 45 ರಷ್ಟು ಮಾತ್ರ ಬಿತ್ತನೆಯಾಗಿದೆ. ಈ ಬಾರಿಯೂ ಮುಂಗಾರು ಮಳೆಯ ಕೊರತೆ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ, ಸಂಭವನೀಯ ಪರಿಸ್ಥಿತಿಯನ್ನು ಎದುರಿಸಲು ಆಡಳಿತ ಯಂತ್ರ ಈಗಿನಿಂದಲೇ ಅದಕ್ಕೆ ಪೂರಕವಾದ ಮುಂದಿನ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ ಎಂದು ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *