ರಾಜಧಾನಿ ಬೆಂಗಳೂರಿನಲ್ಲಿ ಸೈಟ್ (ನಿವೇಶನ) ಖರೀದಿಸುವ ಮುನ್ನ ಸಾರ್ವಜನಿಕರು ತೀವ್ರ ಎಚ್ಚರ ವಹಿಸುವುದು ಅಗತ್ಯವಾಗಿದೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರೋಬ್ಬರಿ 48 ಲಕ್ಷ ರೂ. ಬೆಲೆಬಾಳುವ ಸೈಟ್ ಅನ್ನು ಕೇವಲ ಅರ್ಧ ಬೆಲೆಗೆ, ಅಂದರೆ 22 ಲಕ್ಷ ರೂ.ಗೆ ಕೊಡುವುದಾಗಿ ನಂಬಿಸಿ ವಂಚಿಸಿರುವ ಕೃತ್ಯ ಬೆಳಕಿಗೆ ಬಂದಿದೆ. ಸುಮಾ ಎಂಬ ಮಹಿಳೆಯ ವಿರುದ್ಧ ಈ ಗಂಭೀರ ವಂಚನೆಯ ಆರೋಪ ಕೇಳಿಬಂದಿದೆ.
ಒಂದೇ ಸೈಟ್ ತೋರಿಸಿ ಐವರಿಗೆ ಟೋಪಿ
ಆರೋಪಿ ಸುಮಾ, ನಿವೇಶನ ಖರೀದಿಸುವವರನ್ನೇ ಗುರಿಯಾಗಿಸಿಕೊಂಡು ಒಂದೇ ಸೈಟ್ ಅನ್ನು ಬರೋಬ್ಬರಿ 5 ಮಂದಿಗೆ ತೋರಿಸಿ ವಂಚಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಭಾಗ್ಯವತಿ, ಜಯಶ್ರೀ, ಲತಮ್ಮ, ಗಾಯತ್ರಿ ಹಾಗೂ ಈಶ್ವರಯ್ಯ ಎಂಬುವವರಿಗೆ ಸೈಟ್ ನೀಡುವುದಾಗಿ ನಂಬಿಸಿ, ಅವರಿಂದ ಒಟ್ಟು 42 ಲಕ್ಷಕ್ಕೂ ಅಧಿಕ ಹಣವನ್ನು ವಸೂಲಿ ಮಾಡಿದ್ದಾಳೆ ಎನ್ನಲಾಗಿದೆ. ಆದರೆ, ಮುಂಗಡವಾಗಿ ಲಕ್ಷಾಂತರ ರೂ. ಹಣ ಪಡೆದ ಬಳಿಕ ಸೈಟ್ ಅನ್ನು ನೋಂದಣಿ (ರಿಜಿಸ್ಟ್ರೇಷನ್) ಮಾಡಿಕೊಡದೆ ಸತಾಯಿಸಿದ್ದಾಳೆ. ಇತ್ತ ಸೈಟ್ ಕೂಡ ನೀಡದೆ, ಅತ್ತ ಪಡೆದ ಹಣವನ್ನೂ ಹಿಂತಿರುಗಿಸದೆ ವಂಚನೆ ಎಸಗಿದ್ದಾಳೆ.
ಆರೋಪಿ ಸುಮಾ ಪತ್ತೆಗೆ ಪೊಲೀಸರ ಶೋಧ
ಹಣ ಕಳೆದುಕೊಂಡು ಮೋಸಹೋದ ಸಂತ್ರಸ್ತರು ಇದೀಗ ನ್ಯಾಯ ಕೋರಿ ಬಾಗಲಗುಂಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಆರೋಪಿ ಸುಮಾ ವಿರುದ್ಧ ಅಧಿಕೃತವಾಗಿ ಪ್ರಕರಣ ದಾಖಲಾಗಿದ್ದು, ದೂರು ಸ್ವೀಕರಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ಕಷ್ಟಪಟ್ಟು ದುಡಿದ ಹಣವನ್ನು ಲಪಟಾಯಿಸಿರುವ ಇಂತಹ ವಂಚಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ತಮ್ಮ ಹಣವನ್ನು ಮರಳಿಸಿಕೊಡಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.

Leave a Reply