ಕ್ರಿಕೆಟ್ ಚೆಂಡು ತಗುಲಿದ್ದಕ್ಕೆ ಬಾಲಕರನ್ನು ಶಾಲಾ ಕಿಟಕಿಗೆ ಕಟ್ಟಿ ಚಪ್ಪಲಿಯಿಂದ ಹಲ್ಲೆ: ಮೂವರ ಬಂಧನ

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ನರೇನೂರು ಎಲ್.ಟಿ-01 ಗ್ರಾಮದಲ್ಲಿ ಕ್ರಿಕೆಟ್ ಆಡುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕರನ್ನು ಶಾಲಾ ಕೊಠಡಿಯ ಕಿಟಕಿಗೆ ಹಗ್ಗದಿಂದ ಕಟ್ಟಿ, ಚಪ್ಪಲಿಗಳಿಂದ ಅಮಾನುಷ್ಯವಾಗಿ ಹಲ್ಲೆ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರೇಣುಕಾ ಗೋಪಾಲ ಲಮಾಣಿ, ಬಸವರಾಜ ಗೋಪಾಲ ಲಮಾಣಿ ಮತ್ತು ಅಭಿ ಶಿವಪ್ಪ ಲಮಾಣಿ ಎಂದು ಗುರುತಿಸಲಾಗಿದೆ. ಸರ್ಕಾರಿ ಶಾಲೆಯ ಆವರಣದಲ್ಲಿ ಬಾಲಕರು ಕ್ರಿಕೆಟ್ ಆಡುತ್ತಿದ್ದಾಗ, ಅವರು ಹೊಡೆದ ಚೆಂಡು ಆಕಸ್ಮಿಕವಾಗಿ ಮಹಿಳೆಯೊಬ್ಬರಿಗೆ ತಗುಲಿತ್ತು. ಇದರಿಂದ ಆಕ್ರೋಶಗೊಂಡ ಆರೋಪಿಗಳು, ಬಾಲಕರನ್ನು ಹಿಡಿದು ತಂದು ಶಾಲಾ ಕೊಠಡಿಯ ಕಿಟಕಿಗೆ ಹಗ್ಗದಿಂದ ಕಟ್ಟಿ ಹಾಕಿ, ಚಪ್ಪಲಿಗಳಿಂದ ಕ್ರೂರವಾಗಿ ಥಳಿಸಿದ್ದರು. ಈ ಅಮಾನುಷ್ಯ ಕೃತ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಕೆರೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS), 2023 ರ ವಿವಿಧ ಗಂಭೀರ ಕಲಂಗಳಾದ 115(2), 118(1), 133, 49, 352 ಮತ್ತು 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ಮೂವರೂ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸಿದ್ದಾರ್ಥ ಗೋಯಲ್ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *